ಭಾಗ 156
ಭರತೇಶ್ ಶೆಟ್ಟಿ ,ಎಕ್ಕಾರ್

ಸಂಚಿಕೆ ೧೫೮ ಮಹಾಭಾರತ
ಮಿತಿ ಮೀರಿದಾಗ ಮತಿ ತಪ್ಪುತ್ತದೆ. ಈಗಿನ ಸ್ಥಿತಿಯಲ್ಲಿ ಶಿಶುಪಾಲ ಏಕೋ ಅದೇ ರೀತಿ ವರ್ತಿಸತೊಡಗಿದ್ದಾನೆ ಎಂದೆನಿಸಿತು ಕೆಲವರಿಗೆ.
ಶಿಶುಪಾಲ ತನ್ನ ಕ್ರೋಧಾವೇಶಗಳನ್ನು ಹೊರಹಾಕಲು ನಾಲಗೆಯನ್ನೇ ಖಡ್ಗವಾಗಿಸಿ ಹರಿಯ ಬಿಟ್ಟಿದ್ದಾನೆ. “ಇವನೊಬ್ಬ ಧರ್ಮರಾಯ! ಅಪ್ಪನಾಗಬೇಕಾದ ಪಾಂಡು ಚಕ್ರವರ್ತಿ ಇದ್ದೂ ಯಾರಿಗೊ ಗರ್ಭ ಶುದ್ಧಿಯಿಲ್ಲದೆ, ಹೇಗೋ ಹುಟ್ಟಿದವನು. ತನ್ನ ಸಂಶಯ ನಿವಾರಿಸಲು ಪ್ರಶ್ನೆ ಕೇಳತ್ತಿದ್ದಾನೆ! ಇವನೊಬ್ಬ ಭೀಷ್ಮ ಮುದಿ ಭ್ರಾಂತ, ಹುಟ್ಟಿದ ಮಕ್ಕಳನ್ನೇ ಕೊಂದ ಪಾತಕಿ ಗಂಗೆಯ ಮಗ! ಉತ್ತರ ಕೊಡುತ್ತಿದ್ದಾನೆ. ಅಗ್ರ ಪೂಜೆ ಕೃಷ್ಣನಿಗೆ ಆಗಬೇಕಂತೆ. ಕೃಷ್ಣನೇನು ಸಂಭಾವ್ಯನೇ? ಸಂಸ್ಕಾರ ವಿಹೀನ ಚೋರ, ಸ್ರ್ತೀ ಲಂಪಟ. ಎಂತಹ ದುಸ್ಥಿತಿ ಒದಗಿದೆ ಇಲ್ಲಿ”.
ಈ ಅತಿರೇಕದ ಅಪಸ್ವರವನ್ನು ಕೇಳಿ ಕೆರಳಿದ ಸಹದೇವ ಹೂಂಕರಿಸಿ ಮುಂದಡಿಯಿಡಬೇಕೆನ್ನುವಷ್ಟರಲ್ಲಿ ಶ್ರೀ ಕೃಷ್ಣ ಮಂದಹಾಸ ಮಾತ್ರದಿಂದ ಸೈರಿಸು ಎಂಬಂತೆ ತಡೆದು ನಿಲ್ಲಿಸಿದನು.
ಶಿಶುಪಾಲ ಮತ್ತೆ ಮುಂದುವರಿಯ ತೊಡಗಿದ. “ಧರ್ಮರಾಯಾ, ನಿನಗೆ ಭೀಷ್ಮರ ಮಾತು ವೇದವಾಕ್ಯವೋ? ಅಲ್ಲಾ ಕೃಷ್ಣನ ಮೇಲೆ ಅತಿಪ್ರೀತಿಯೋ? ಇರಲಿ, ಆಕ್ಷೇಪವಿಲ್ಲ. ಈ ಸಭೆಯಲ್ಲಿ ಅವರಿಬ್ಬರೇ ಇರುವುದಲ್ಲವಲ್ಲ? ಎಲಾ ಧರ್ಮರಾಯ ನಿಮ್ಮಿಬ್ಬರ ಸಂಭಾಷಣೆ ಕೇಳಿದ್ದೇನೆ. ಭೀಷ್ಮರು ಹೇಳಿದರೆಂದು ನೀನು ತಲೆಯಾಡಿಸಿದೆ. ಈ ಸಭೆಯಲ್ಲಿ ಶಸ್ತ್ರ ಶಾಸ್ತ್ರ ಪಂಡಿತ ಗುರು ದ್ರೋಣಾಚಾರ್ಯರಿಗಿಂತ ಮಿಗಿಲಾದ ಆಚಾರ್ಯ ಯಾರು? ವೇದವ್ಯಾಸರಿಗಿಂತ ಶ್ರೇಷ್ಟ ಋತ್ವಿಜರಿದ್ದಾರೋ? ದ್ರುಪದರಾಜ ನಿಮ್ಮ ಆಪ್ತ ಸಂಬಂಧಿ ಆತನಿಗಿಂತಲೂ ಈ ಕಳ್ಳ ನಿಕಟ ಸಂಬಂಧಿಯೋ? ಅಶ್ವತ್ಥಾಮನಿಗಿಂತ ಉತ್ತಮ ಸ್ನಾತಕನೋ ಈ ಅಲ್ಪಜ್ಞಾನಿ? ಮಾದ್ರಾಧಿಪ ಶಲ್ಯನಿಗಿಂತ ಮಿಗಿಲಾದ ವೃದ್ಧ ರಾಜನಾಗಿದ್ದಾನೋ? ವಿದುರನಂತೆ ನಿಮ್ಮ ಹಿತ ಬಯಸಿದ ಸ್ನೇಹಿತರು ಯಾರಿದ್ದಾರೆ? ಇಷ್ಟೆ ಅಲ್ಲ, ಇಲ್ಲಿ ಇನ್ನೂ ಬಹಳ ಶ್ರೇಷ್ಟರಿದ್ದಾರೆ. ಕಿಂಪುರುಷರಿಗೆ ಆಚಾರ್ಯರಾದ ದ್ಯುಮನರಿದ್ದಾರೆ, ಗುರು ಕೃಪಾಚಾರ್ಯರಿದ್ದಾರೆ, ಶ್ರೇಷ್ಠ ಪುರೋಹಿತ ಧೌಮ್ಯರಿದ್ದಾರೆ, ಶತಾನಂದರು, ರಾಜಾ ಭೀಷ್ಮಕ, ಸೌಬಲ, ಜಯದ್ರಥಾದಿಗಳು ಸೇರಿದ್ದಾರೆ. ನಿಮ್ಮವರೆ ಆದ ಹಿರಿಯರು ಧೃತರಾಷ್ಟ್ರ ಮಹಾರಾಜರಿದ್ದಾರೆ. ಕಡೇ ಪಕ್ಷ ಭೀಷ್ಮಾಚಾರ್ಯರೇ ಆದರು ಒಂದರ್ಥದಲ್ಲಿ ಒಪ್ಪಿಕೊಳ್ಳಬಹುದಿತ್ತು. ಎಲ್ಲಾ ಬಿಟ್ಟು ಸಂಸ್ಕಾರ ಇಲ್ಲದ ಆ ಗೊಲ್ಲರವನಿಗೆ ಪೂಜೆಯೋ? ಅದೂ ಅಗ್ರ ಪೂಜೆ? ! ನಿನಗೆ ಆತನ ಬಗ್ಗೆ ಅಪಾರ ಅಕ್ಕರೆ ಪ್ರೀತಿ ಇದ್ದರೆ ಪ್ರತ್ಯೇಕವಾಗಿ ಒಳಕರೆದುಕೊಂಡು ಹೋಗಿ ಪಾದ ತೊಳೆದು, ಅಭಿಷೇಕ ಮಾಡಿಸು. ಅಲಂಕಾರ ಮಾಡಿಸಿ, ನೈವೇದ್ಯ ಬೇಕಿದ್ದರೂ ಸಮರ್ಪಿಸು, ಪೂಜೆ ಮಾಡು ಏನು ಬೇಕಾದರೂ ಮಾಡಿಕೋ. ಯಾರು ಕೇಳುತ್ತಾರೆ ನಿನ್ನಲ್ಲಿ?. ಈ ಸಭೆಗೆ ಮಹಾನುಭಾವರಾದ ರಾಜಾಧಿ ಮಹಾರಾಜರನ್ನೆಲ್ಲಾ ಆಮಂತ್ರಿಸಿ, ಜ್ಞಾನಿಗಳೂ, ತಪಸ್ವಿಗಳೂ, ಹಿರಿಯರೂ ಸೇರಿರುವ ರಾಜಸಭೆಯಲ್ಲಿ, ಸಾರ್ವಜನಿಕ ಕಪ್ಪ ಸಂಗ್ರಹಿಸಿ ಈ ನೀಚನಿಗೆ ಪೂಜೆಯೋ? ಹೆದರಿ ಓಡಿಹೋಗಿ ಸಮುದ್ರ ಮಧ್ಯ ಪ್ರಾಣಭಯದಿಂದ ಬದುಕುತ್ತಿದ್ದ ಈ ರಣಹೇಡಿಗೆ ವೀರ ವಿಕ್ರಮಿ ರಾಜರ ಮುಂದೆ ಪೂಜೆಯೋ?
“ಎಲಾ ಧರ್ಮರಾಯ ಸ್ಪಷ್ಟವಾಗಿ ಒಂದು ವಿಚಾರ ತಿಳಿದುಕೋ, ನಾವು ಸೋತು ಕಪ್ಪ ಕೊಟ್ಟವರಲ್ಲ. ಸತ್ಕಾರ್ಯಕ್ಕೆ ಸಹಕಾರಿಗಳಾಗಿ ಗೌರವಸೂಚಕ ಕಾಣಿಕೆ ಕೊಟ್ಟಿದ್ದೇವೆ. ಈ ರೀತಿಯಾಗಿ ನಮಗೆಲ್ಲರಿಗೂ ಬಹಿರಂಗ ಅವಮಾನ ಮಾಡಿದ ನಿನಗೂ, ಸಂಸ್ಕಾರ ಹೀನ, ಹಾಲು ಬೆಣ್ಣೆ ಕದ್ದು ತಿಂದು ಬದುಕಿ, ಅರ್ಧಂಬರ್ಧ ಕಲಿತು ಬಂದ ಅಜ್ಞಾನಿ, ಯಾರು ಯಾರ ಮನೆಯ ಹೆಣ್ಮಕ್ಕಳ ಶೀಲಗೆಡಿಸಿದ ಜಾರ, ಕಪಟಿ, ನಂಬಿಕೆ ದ್ರೋಹಿ, ತನ್ನ ಸಂಬಂಧಿ ಹಿರಿಯರನ್ನೇ ಕೊಂದ ಪಾತಕಿಗೆ ನಮ್ಮೆದುರು ಪೂಜೆಗೈದರೆ ನಮ್ಮ ಗೌರವ, ಮಾನ ರಕ್ಷಣೆಯನ್ನು ಸ್ವಯಂಬಲದಿಂದ ಉಳಿಸುಕೊಳ್ಳಬಲ್ಲ ಕ್ಷತ್ರಿಯರು ನಾವಾಗಿದ್ದೇವೆ. ನಿನ್ನನ್ನಾಗಲಿ ನಿನ್ನ ಕೃಷ್ಣನನ್ನಾಗಲಿ ಸುಮ್ಮನೆ ಬಿಡುವ ಪ್ರಸಂಗವೇ ಇಲ್ಲ. ಎಚ್ಚೆತ್ತುಕೊಂಡು ತಿದ್ದಿ ಯೋಗ್ಯನಿಗೆ ಅಗ್ರ ಪೂಜೆ ನಡೆದರೆ ಸರಿ, ಇಲ್ಲವಾದರೆ ನಡೆಯಬಹುದಾದ ಅನಾಹುತಕ್ಕೆ ನೀನೆ ಹೊಣೆಗಾರನಾಗುವೆ.”
ಈ ರೀತಿ ಶಿಶುಪಾಲ ಬೊಬ್ಬಿರಿದಾಗ ಸಾತ್ಯಕಿಯಾದಿ ಯಾದವರು ಕೋಪಗೊಂಡು ಕೆಂಡಾಮಂಡಲರಾಗಿ ಎದ್ದು ಯುದ್ಧ ಸಿದ್ಧರಾದರು. ಆಗ ಕೃಷ್ಣ ಭ್ರೂ ಭೃಂಗದಿಂದಲೆ ( ಕಣ್ಸನ್ನೆ) ಅವರೆಲ್ಲರನ್ನು ಕದಲದಂತೆ ತಡೆದನು. ಅರ್ಜುನ, ಧರ್ಮರಾಯಾದಿಗಳು ಧರ್ಮವರಿತು ಸಹನೆ ತೋರಿದರು. ಭೀಮನಿಗೆ ಶಿಶುಪಾಲನಿಂದ ಆಗುತ್ತಿದ್ದ ನಿಂದನೆ ಅಸಹನೀಯವಾಗಿ ಆತನನ್ನು ಬಡಿಯಲು ಮುನ್ನುಗ್ಗಿದನು. ಪ್ರಾಯದ ವರ್ಷ ಸಂಖ್ಯೆಯಿಂದ ಅಜ್ಜನಾಗಿದ್ದರೂ, ತ್ರಾಣದಲ್ಲಿ ಅತಿಬಲಾನ್ವಿತರಾಗಿದ್ದ ಭೀಷ್ಮಾಚಾರ್ಯರು ಭೀಮನನ್ನು ಎಡ ಕೈಯಿಂದ ಆವರಿಸಿ ಹಿಡಿದೆತ್ತಿ ಒಂದು ಸುತ್ತು ತಿರುಗಿಸಿ ಹಿಂದೆ ತಂದು ನಿಲ್ಲಿಸಿದರು. ಬುದ್ದಿವಾದದ ಮಾತು ಹೇಳುತ್ತಾ ಶಿಶುಪಾಲನ ಜನ್ಮದ ಕಥೆಯನ್ನು ಹೇಳತೊಡಗಿದರು.
ಮುಂದುವರಿಯುವುದು…