ತಂದೆಯ ಒತ್ತಡ ತಾಳಲಾರದೆ ಅಪ್ಪನನ್ನು ಕೊಂದು ತುಂಡು ತುಂಡಾಗಿ ಕತ್ತರಿಸಿ ಎಸೆದ ಮಗ

ಲಖನೌ: ವ್ಯಕ್ತಿ ಯೋರ್ವ ಮಗನಿಂದಲೇ ಬರ್ಬರವಾಗಿ ಹತ್ಯೆಯಾದ ಘಟನೆ ಉತ್ತರ ಪ್ರದೇಶದ ಲಖನೌ ನಲ್ಲಿ ವರದಿಯಾಗಿದೆ.
ಕೊಲೆಯಾದ ವ್ಯಕ್ತಿಯನ್ನು ಮನ್ವೇಂದ್ರ ಸಿಂಗ್ (49) ಎಂದು ಗುರುತಿಸಲಾಗಿದ್ದು, ಈತ ಔಷಧಿ ಮತ್ತು ಮದ್ಯದ ಉದ್ಯಮ ನಡೆಸುತ್ತಿದ್ದು, ಕಳೆದ ಶುಕ್ರವಾರ ನಾಪತ್ತೆಯಾಗಿದ್ದಾರೆ.
ಪೊಲೀಸರ ತನಿಖೆಯಲ್ಲಿ ಆಶ್ಚರ್ಯಕರ ಸಂಗತಿ ಬಯಲಾಗಿದೆ. ಮನ್ವೇಂದ್ರ ಸಿಂಗ್ ಮಗನನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಿ ವೈದ್ಯಕೀಯ ವೃತ್ತಿಯನ್ನು ಮುಂದುವರಿಸಬೇಕೆಂದು ಒತ್ತಾಯ ಮಾಡುತ್ತಿದ್ದು, ಮಗನಿಗೆ ಇದು ಇಷ್ಟವಿರಲಿಲ್ಲ. ಇದೇ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿದ್ದು, ಮಗ ಅಕ್ಷತ್ ತಂದೆಯ ಒತ್ತಡ ತಾಳಲಾರದೆ ಒಮ್ಮೆ ಮನೆಯಿಂದ ಓಡಿ ಹೋಗಿದ್ದ ಎನ್ನಲಾಗಿದೆ.
ಫೆ. 20 ಶುಕ್ರವಾರ ಸಂಜೆಯ ವೇಳೆಗೆ ಮತ್ತೆ ಇದೇ ವಿಚಾರಕ್ಕೆ ಜಗಳ ಆರಂಭಗೊಂಡಿದ್ದು , ಅಕ್ಷತ್ ತನ್ನ ತಂದೆಗೆ ರೈಫಲ್ ನಿಂದ ಗುಂಡು ಆರಿಸಿ ಕೊಲೆ ಮಾಡಿದ್ದಾನೆ. ನಂತರ ತಂದೆಯ ಶವವನ್ನು ತುಂಡು ತುಂಡಾಗಿ ಕತ್ತರಿಸಿ ,ಪ್ಲಾಸ್ಟಿಕ್ ನಲ್ಲಿ ತುಂಬಿ ಹಲವು ಭಾಗಗಳನ್ನು ಒಂದೆಡೆ ವಿಲೇವಾರಿ ಮಾಡಿ, ಮುಂಡ ಸೇರಿದಂತೆ ಕೆಲವು ಭಾಗಗಳನ್ನು ಮನೆಯೊಳಗೆ ನೀಲಿ ಡ್ರಮ್ ನಲ್ಲಿ ಇರಿಸಿದ್ದಾನೆ ಎನ್ನಲಾಗಿದೆ.
ಇದೀಗ ಪೊಲೀಸರ ಎದುರು, ಅಕ್ಷತ್ ತಪ್ಪೊಪ್ಪಿಗೆ ನೀಡಿದ್ದು ವಿಧಿ ವಿಜ್ಞಾನ ತಂಡ ಮನೆಯಿಂದ ಸ್ಯಾಂಪಲ್ ಗಳನ್ನು ಸಂಗ್ರಹಿಸಿದೆ. ಅಕ್ಷತ್ ನನ್ನು ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗಿದ್ದು, ಸಾಕ್ಷಾಧಾರಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಹಿರಿಯ ಅಧಿಕಾರಿ ವಿಕ್ರಾಂತ್ ವೀರ್ ತಿಳಿಸಿದ್ದಾರೆ.



