ಚಿಕ್ಕ ಚಿಕ್ಕ ಕಾರಣಕ್ಕೆ ಖುಷಿ ಪಡುತ್ತಾ, ದ್ವೇಷ ಅಸೂಯೆ ಮರೆತು….ಮತ್ತೆ ಮಕ್ಕಳಾಗೋಣ.✨
ಪ್ರಜ್ವಲಾ ಶೆಣೈ, ಕಾರ್ಕಳ

ಮುಗ್ಧ ಮನಸ್ಸಿನ ಮುದ್ದು ಕಂದಮ್ಮಗಳಿಗಾಗಿಯೇ ಒಂದು ದಿನವಿದೆ ಎಂದರೆ ಅದು ಮತ್ತಾವುದೂ ಅಲ್ಲ, ಮಕ್ಕಳ ದಿನಾಚರಣೆ. ಭಾರತದ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರ ಸವಿ ನೆನಪಿಗಾಗಿ ಈ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ದೇಶದ ಪ್ರಧಾನಿ ಎನ್ನುವುದಕ್ಕಿಂತ ಮಕ್ಕಳ ಪ್ರೀತಿಯ ಚಾಚಾ ನೆಹರೂ ಆಗಿ ಮಕ್ಕಳ ಮನಸ್ಸನ್ನು ಗೆದ್ದವರು. ನೆಹರೂ ಅವರಿಗೆ ಗುಲಾಬಿ ಹೂವು ಮತ್ತು ಮಕ್ಕಳೆಂದರೆ ಪಂಚಪ್ರಾಣ.ಅವರ ಜೇಬಿನಲ್ಲಿ ಸದಾ ಗುಲಾಬಿ ಹೂವು ನಗುತ್ತಿತ್ತು.ಚಾಚಾ ಎಂದು ಪ್ರೀತಿಯಿಂದ ಅವರನ್ನು ಮಕ್ಕಳು ಕರೆಯುತ್ತಿದ್ದರು.ಹೀಗಾಗಿ ಅವರ ಜನ್ಮ ದಿನವಾದ ನವೆಂಬರ್ 14 ರಂದು ಮಕ್ಕಳ ದಿನಾಚರಣೆ ಎಂದು ಪ್ರತಿ ವರ್ಷ ಆಚರಿಸಲಾಗುತ್ತಿದೆ.”ಮಕ್ಕಳೆಂದರೆ
ಉದ್ಯಾನವನದಲ್ಲಿರುವ ಗುಲಾಬಿ ದಳಗಳ ಹಾಗೆ,ಅವರನ್ನು ಬಹಳ ಜಾಗರೂಕತೆಯಿಂದ ಮತ್ತು ಪ್ರೀತಿಯಿಂದ ಆರೈಕೆ ಮಾಡಬೇಕು”ಎನ್ನುವ ಮಾತು ಎಂದೆಂದಿಗೂ ಅಮರ.
ಮಕ್ಕಳ ಜೊತೆ ನಮ್ಮ ಒಡನಾಟವಿದ್ದರೆ ಎಷ್ಟೇ ನೋವಿದ್ದರೂ ಅರೆಕ್ಷಣದಲ್ಲಿ ಮಾಯವಾಗುತ್ತದೆ. ಬಹುತೇಕ ಯಾರೇ ಆಗಲಿ,ಜೀವನದಲ್ಲಿ ಮತ್ತೆ ಹಿಂದಿರುಗಿ ನೋಡುವಾಗ ಬಾಲ್ಯ ನೆನಪಾಗುತ್ತದೆ. ಮತ್ತೆ ಮಗುವಾಗುವಾಸೆ ಚಿಗುರುತ್ತದೆ.
ಮಗು ಮತ್ತು ನಗು
ಮಗು ಅನ್ನುವ ಪದದಲ್ಲಿಯೇ ಮುಗ್ಧತೆಯ ಸವಿ ಇದೆ.ಮಕ್ಕಳ ಮುಖದಲ್ಲಿ ನಗು ಅರಳಿದರೆ ಅದೇ ಖುಷಿ.ನಿಷ್ಕಲ್ಮಶ ನಗುವನ್ನು ಖರೀದಿಸಲು ಸಾಧ್ಯವಿಲ್ಲ.ಪ್ರೀತಿಯ ಸವಿ ಮಾತಿನಿಂದ ಸಂಪಾದಿಸಬಹುದು.ಮಗುವಿನ ನಗು ಪ್ರಪಂಚದ ಎಲ್ಲಾ ಚಿನ್ನಕ್ಕಿಂತ ಅಮೂಲ್ಯ.ಜಗತ್ತಿನ ಎಲ್ಲಾ ನೋವನ್ನು ಮರೆಸುವ ಶಕ್ತಿ ಮಗುವಿನ ನಗುವಿಗಿದೆ.
ಮಕ್ಕಳಿಗೆ ಮೀಸಲಿರಲಿ ನಮ್ಮ ಸಮಯ
ಮಕ್ಕಳಿಗೆ ನಾವು ಖರೀದಿಸಿ ಕೊಡುವ ದುಬಾರಿ ಉಡುಗೊರೆಗಿಂತ ಅವರ ಜೊತೆ ಒಂದಿಷ್ಟು ಹೊತ್ತು ಪ್ರೀತಿಯಿಂದ ಸಮಯ ಕಳೆಯುವುದು ಬಹಳ ಮುಖ್ಯ.ನಮ್ಮ ಮಕ್ಕಳು ನಾಳೆ ಏನಾಗಬೇಕು ಎಂದು ಅವರ ಭವಿಷ್ಯದ ಬಗ್ಗೆ ಚಿಂತಿಸುತ್ತಾ ಅವರ ಇಂದಿನ ದಿನವನ್ನು ಕಸಿದುಕೊಳ್ಳುತ್ತೇವೆ. ಕಾಲ ಯಾರಿಗೂ ಕಾಯುವುದಿಲ್ಲ.ಉರುಳುತ್ತಾ ಉರುಳುತ್ತಾ ಬಾಲ್ಯ ಕಳೆದೇ ಹೋಗುತ್ತದೆ.ನೋಡ ನೋಡುತ್ತಿದ್ದಂತೆ ನಮ್ಮ ಕಣ್ಣೆದುರೇ ನಮ್ಮ ಮಕ್ಕಳು ಭುಜದೆತ್ತರ ಬೆಳೆದು ನಿಲ್ಲುತ್ತಾರೆ. ಮುಗ್ಧತೆ ಮಾಯವಾದ ಮೇಲೆ ಪ್ರೀತಿ ತೋರಿದರೆ ನೈಜವಾದ ಪ್ರೀತಿ ಸಿಗದೇ ಹೋಗಬಹುದು.ಏನೇ ಇರಲಿ ನಮ್ಮ ಸಮಯ ಮಗುವಿನ ಜೊತೆ ಒಡನಾಟಕ್ಕೆ ಮೀಸಲಿರಲಿ.
ಪ್ರತಿ ಮಗುವಿಗೂ ವ್ಯಕ್ತಿತ್ವವಿದೆ
ಪ್ರತಿಯೊಂದು ಮಗುವಿಗೂ ಅದರದ್ದೇ ಆದ ಮನಸ್ಸಿದೆ.ತನ್ನದೇ ಆದ ಭಾವನೆಗಳಿವೆ.ಭರವಸೆ ಮತ್ತು ಆಶಾವಾದದ ಕಣ್ಣುಗಳಿಂದ ಜಗತ್ತನ್ನು ನೋಡುವ ಮನಸ್ಸು ನಮ್ಮದಾಗಬೇಕು.ಮಕ್ಕಳನ್ನು ನಿಂದಿಸುವುದು,ಹಂಗಿಸುವುದು,ಕುಗ್ಗಿಸುವುದು ಕೂಡ ಅವರ ವ್ಯಕ್ತಿತ್ವಕ್ಕೆ ಮಾಡುವ ಅಪಚಾರ. ಚಿಕ್ಕವರೆಂದು ಜರಿಯದೆ ಪ್ರೀತಿ ತೋರಿದರೆ ಮನಸ್ಸು ಮೊಗ್ಗಾಗಿ,ಹೂವಾಗಿ ಅರಳಿ ನಗು ನಗುತ್ತಾ ತನ್ನ ಘಮವನ್ನು ಪಸರಿಸುವುದು.
ಕನಸುಗಳ ಕೊಲ್ಲದಿರಿ
ಅರಳುವ ಕಣ್ಣುಗಳಲ್ಲಿ ಹೊಚ್ಚ ಹೊಸ ಕನಸುಗಳನ್ನು ಕಾಣುತ್ತಾ ಕಲ್ಪನಾ ಲೋಕದಲ್ಲಿ ವಿಹರಿಸುತ್ತಾ ಸ್ವಚ್ಛಂದವಾಗಿ ಹಾರಾಡುವ ಮಕ್ಕಳ ಕನಸುಗಳಿಗೆ ಮಿತಿಯಿಲ್ಲ. ಮಕ್ಕಳ ಕಲ್ಪನೆಗಳಿಗೆ ಈ ಜಗತ್ತು ಕೂಡ ಕಿರಿದಾಗಿ ಕಾಣಿಸುತ್ತದೆ.ಅವರ ಆಸೆ ಕನಸುಗಳನ್ನು ಚಿಗುರಲ್ಲೇ ಹೊಸಕಬಾರದು.ಮಕ್ಕಳ ದಿನ ಅವರ ಇರುವಿಕೆಯನ್ನು ಸಂಭ್ರಮಿಸುವ ದಿನವಷ್ಟೇ ಅಲ್ಲ,ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ದಿನವೂ ಹೌದು.ಅತಿಯಾದ ಶಿಸ್ತು ಮಕ್ಕಳಿಗೆ ಸಜೆಯಾಗಬಾರದು.
ಕನಸುಗಳಿಗೆ ಬಣ್ಣ ತುಂಬಿ
ಕನಸುಗಳು ಬದುಕಿಗೆ ಜೀವ ತುಂಬುವ ಒಲವಿನ ಒರತೆಗಳು.ಕನಸುಗಳೊಂದಿಗೆ ಬಾಲ್ಯದ ಸವಿಯನ್ನು ಅನುಭವಿಸಿದರೆ ಎಂದಿಗೂ ವಯಸ್ಸಾಗುವುದಿಲ್ಲ.ಮಕ್ಕಳ ದಿನ ಅವರ ಇರುವಿಕೆಯನ್ನು ಸಂಭ್ರಮಿಸುವ ದಿನವಷ್ಟೇ ಅಲ್ಲ,ದೊಡ್ಡವರ ಬಾಲ್ಯವನ್ನು ಮತ್ತೆ ಹಿಂದೆ ತಿರುಗಿ ನೆನಪಿಸಿಕೊಂಡು ಖುಷಿ ಪಡುವ ಸುಂದರ ಘಳಿಗೆಯೂ ಹೌದು.ಸವಿ ನೆನಪುಗಳ ಮೆಲುಕು ಹಾಕುವ ಅದ್ಭುತ ಕ್ಷಣವೂ ಹೌದು.ಮಕ್ಕಳ ಕನಸಿಗೆ ನೀರೆರೆದು ಪೋಷಿಸುವ ಕೈಗಳು ನಾವಾಗಬೇಕು.
ಹೋಲಿಕೆ ಬೇಡ
ಮಕ್ಕಳನ್ನು ಒಬ್ಬರ ಜೊತೆ ಇನ್ನೊಬ್ಬರನ್ನು ಹೋಲಿಕೆ ಮಾಡುವ ಕೀಳು ಮನೋಭಾವವನ್ನು ಮೊದಲು ಬಿಡಬೇಕು.ಸೂರ್ಯ ಮತ್ತು ಚಂದ್ರರು ಕೂಡ ಅವರವರ ಸಮಯ ಬಂದಾಗ ಬೆಳಕನ್ನು ಚೆಲ್ಲುತ್ತಾರೆ.ಹೀಗಿರುವಾಗ ಪ್ರತಿ ಮಗುವೂ ತನ್ನ ಆಸಕ್ತಿಗನುಗುಣವಾಗಿ ತಮ್ಮ ಪ್ರತಿಭೆಯನ್ನು ತೋರುತ್ತಾರೆ.ಪ್ರತಿಯೊಂದು ಮಗುವೂ ವಿಭಿನ್ನವಾದ ಬಣ್ಣ ಬಣ್ಣದ ಹೂಗಳಿದ್ದಂತೆ .ಅವುಗಳೆಲ್ಲ ಸೇರಿ ಸುಂದರವಾದ ಹೂದೋಟ ನಿರ್ಮಾಣವಾಗುವುದು.
ಮಕ್ಕಳು ಭೂಲೋಕದ ನಕ್ಷತ್ರಗಳು
ಮಕ್ಕಳು ಜಗತ್ತು ಬೆಳಗುವ ಮಿನುಗು ತಾರೆಗಳು.ಒಂದೊಂದು ತಾರೆಯೂ ವಿಭಿನ್ನ,ಅದ್ಭುತ,ವಿಸ್ಮಯ! ನಕ್ಷತ್ರಗಳ ಮಿಂಚಂತೆ ಕಣ್ಣ ಹೊಳಪನ್ನು ಇಮ್ಮಡಿ ಗೊಳಿಸುವ ಶಕ್ತಿ ಮಗುವಿಗಿದೆ.ಯಾವ ಕಾರಣವೂ ಇಲ್ಲದೆ ಚಿಕ್ಕ ಚಿಕ್ಕ ಕಾರಣಕ್ಕೆ ಖುಷಿ ಪಡುವ ಸ್ವಭಾವವನ್ನು ನಾವು ಮಕ್ಕಳಿಂದ ಕಲಿಯಬೇಕು.ಮಕ್ಕಳು ಮನೆಯ ನಂದಾ ದೀಪ. ಆ ದೀಪ ಸದಾ ಉರಿಯುತ್ತಿರುವಂತೆ ನೋಡಿ ಕೊಳ್ಳುವುದು ನಮ್ಮ ಗುರಿಯಾಗಬೇಕು.ಮಕ್ಕಳು ಖುಷಿಯಾಗಿದ್ದರೆ,ನಕ್ಕರೆ ಅದೇ ಸ್ವರ್ಗ.ಅಲ್ಲವೇ?…




















