ಕಥೆ (ಭಾಗ- 32)
ಚೇತನ್ ವರ್ಕಾಡಿ

ಮಿಥುನ್ ಮಾತು ಮುಂದುವರಿಸಿ, ನಮ್ಮ ಮನೇಲಿ ಅಂತ ಹುಡುಗಿ ಯಾರೂ ಇಲ್ಲ ಕಣೊ,ಇರೋದೆ ಆಂಟಿ ಅಂಕಲ್ ನಮ್ಮ ಮಧು ಬಿಟ್ರೆ ಈ ಮನೆಕೆಲಸಕ್ಕೆ ಅಂತ ಇರುವವಳು ನಮ್ಮ ಮಂಗಳ ಬಿಟ್ರೆ ನರ್ಸ್ ಕೆಲಸ ಕಲಿತ ಹುಡುಗಿ ಇಲ್ಲ ಎಂದು ಹೇಳಿದಾಗ!ಯಾಕೊ ಮಿಥುನ್ ಇಲ್ಲ ಅಂತಿಯಾ ನಿಮ್ ಮನೆ ಕೆಲಸದ ಮಂಗಳಾನೆ ಇನ್ಮುಂದೆ ಮಧುವಿನ ನರ್ಸ್, ಆಕೆಯಲ್ಲಿ ಮಧುವನ್ನು ಗುಣಪಡಿಸುವ ಅದೇನೊ ಒಂದು ಶಕ್ತಿಯಿದೆ ಎಂದು ಹೇಳಿದಾಗ!ಎಲ್ಲರಿಗೂ ಆಶ್ಚರ್ಯ. ಏನಪ್ಪ ಪ್ರತಾಪ್ ಈ ಹಳ್ಳಿಹುಡುಗಿಯಿಂದ ನಮ್ಮ ಮಧುವನ್ನು ಬದಲಾಯಿಸುವ ಅಂತಹ ಶಕ್ತಿಯಾದರೂ ಏನಿದೆ ಎಂದು ಸುಗಂಧಿ ಆಶ್ಚರ್ಯದಿಂದ ಕೇಳಿದಾಗ,ನೋಡಿ ಆಂಟಿ ಎಲ್ಲದಕ್ಕೂ ಇವತ್ತೆ ಉತ್ತರ ನೀಡೊಕ್ಕಾಗಲ್ಲ ನೋಡೋಣ ಸಮಯವೇ ಉತ್ತರಿಸಬಹುದು,ಎಂದು ಹೇಳಿ ಅಲ್ಲಿಂದ ಹೊರಗಡೆ ನಡೆದ.ಮಿಥುನ್‌ಗೆ ಎಲ್ಲವೂ ವಿಚಿತ್ರವಾಗಿ ಕಾಣತೊಡಗಿತು. ಮಂಗಳ ತಾನು ಮೆಚ್ಚಿದ ಹುಡುಗಿ ಅದೂ ಅಲ್ಲದೆ ಮಧುವಿಗೆ ಆಕೆಯನ್ನು ಪರಿಚಯಿಸಿದ್ದೇ ನಾನು, ಈಗಿರುವಾಗ ಈ ಪ್ರತಾಪ್ ಮಂಗಳಳಿಂದ ಮಧು ಗುಣಮುಖವಾಗುತ್ತಾನೆ ಎಂದು ಹೇಳುವುದರ ಒಳಗಿನ ಗುಟ್ಟೇನೆಂದು ತಿಳಿಯದೆ ಚಿಂತೆಯೊಳಗೆ ಬಿದ್ದ.ಏನೆ ಆಗಲಿ ತನ್ನ ಆಪ್ತ ಮಿತ್ರ ಮತ್ತೆ ಮೊದಲಿನಂತಾದರೆ ಸಾಕು ಅಂದುಕೊಂಡು,ಪ್ರತಾಪ್‌ನಿಗೆ ಆ ಮನೆಯಲ್ಲಿ ಇರಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಿ ತನ್ನ ಕೆಲಸದತ್ತ ಹಿಂತಿರುಗಿದ…
ಇತ್ತ ಸೌಂಧರ್ಯಳಿಗೆ ಮಧುವಿನ ಮೇಲಿದ್ದ ಅಷ್ಟೊಂದು ಪ್ರೀತಿಯೂ ಕರಗಿ ನೀರಾಗಿ ಹೋಗಿದೆ.ಸಂಪೂರ್ಣವಾಗಿ ಮಧುವನ್ನು ಮರೆತಂತೆ ಕಾಣುತ್ತಿದ್ದಳು.ಸುಂದರರಾಯರು ಕೂಡ ಮಗಳಿಗೆ ಬೇರೆ ಹುಡುಗನನ್ನು ಹುಡುಕುವ ಕಾರ್ಯಕ್ಕೆ ಮತ್ತೆ ಹೆಜ್ಜೆ ಮುಂದಿಟ್ಟರು…
ಪ್ರತಾಪ್‌ನಿಂದ ಮಧುವಿಗೆ ಮೊದಲ ದಿನದ ಚಿಕಿತ್ಸೆ ಆರಂಭವಾಯಿತು.ಏನು ತಿಳಿಯದ ಮಂಗಳ ನರ್ಸ್ ಕೆಲಸ ಮಾಡುತ್ತಿದ್ದಾಳೆ.ಹಳ್ಳಿ ಹುಡುಗಿಗೆ ಎಲ್ಲವೂ ಹೊಸ ಹೊಸ ಅನುಭವ. ಪ್ರತಾಪ್ ಹೇಳಿದಂತೆಯೆ ಎಲ್ಲಾ ಕೆಲಸವನ್ನು ಅಚ್ಚುಕಟ್ಟಾಗಿ ಮಾಡತೊಡಗಿದಳು.ದಿನಗಳು ಕಳೆಯಿತು ,ವಾರಕಳೆಯಿತು,ಹೆತ್ತ ತಾಯಿಯೊಬ್ಬಳು ತನ್ನ ಮಗುವನ್ನು ಎಷ್ಟೊಂದು ಜಾಗರೂಕತೆಯಿಂದ ನೋಡಿಕೊಳ್ಳುತ್ತಾಲೊ ಹಾಗೆಯೆ ಮಂಗಳ ಮಧುವನ್ನು ನೋಡಿಕೊಂಡಳು.ಸಮಯಕ್ಕೆ ಸರಿಯಾಗಿ ಊಟ,ಮಾತ್ರೆ,ವ್ಯಾಯಾಮ ಎಲ್ಲವನ್ನು ಡಾಕ್ಟರ್ ಸಲಹೆಯಂತೆ ಮಾಡಿಸುತ್ತಿದ್ದಳು.ಇದೇ ದಿನಚರಿ ಮುಂದುವರಿಯತೊಡಗಿತು….
ತಿಂಗಳೊಂದು ಕಳೆಯಿತು…
ಪ್ರತಾಪ್‌ನಿಗೆ ತನ್ನ ಆಸ್ಪತ್ರೆಯಿಂದ ಆರ್ಜೆಂಟಾಗಿ ಕಾಲ್ ಬಂತು.ಹೋಗದೆ ಇರೊ ಪರಿಸ್ಥಿತಿಯಲ್ಲಿ ಅವನಿರಲಿಲ್ಲ.ತಿಂಗಳೊಂದು ಆದರೂ ಮಧುವಿನಲ್ಲಿ ಬದಲಾವಣೆ ಕಾಣದ ಪ್ರತಾಪ್ ಚಿಂತೆಗೊಳಗಾದ! ಎಲ್ಲವನ್ನೂ ದೇವರ ಮೇಲೆ ಭಾರ ಹಾಕಿ ಮಂಗಳಳನ್ನು ಕರೆದು ಮಧುವಿನ ಆರೋಗ್ಯದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿ ತಿಂಗಳೊಳಗೆ ಹಿಂತಿರುಗುವುದಾಗಿ ಹೇಳಿ ಅಲ್ಲಿಂದ ಅಮೇರಿಕಾಕ್ಕೆ ಹಾರಿದ…
ಮಂಗಳ ಮಧುವಿನ ಬದುಕನ್ನು ಹೇಗಾದರೂ ಮಾಡಿ ಮತ್ತೆ ಬಂಗಾರವಾಗಿಸಬೇಕೆಂದು ಪಣತೊಟ್ಟಳು…
(ಮುಂದುವರಿಯುವುದು)













