
ಮಂಗಳೂರು: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಮೆಸ್ಕಾಂ ಕಚೇರಿಯಲ್ಲಿ ನಡೆದ ಸಭೆಯ ಬಳಿಕ ಮಾತನಾಡಿ ಉಳ್ಳಾಲ ನಗರಸಭೆ ಮತ್ತು ಸೋಮೇಶ್ವರ ಪುರಸಭೆಯ ಹಲವು ಭಾಗಗಳಲ್ಲಿ ಭೂಗತ ವಿದ್ಯುತ್ ಕೇಬಲ್ ಅಳವಡಿಸಲು 186.45 ಕೋಟಿ ರೂ. ಯೋಜನೆ ಶೀಘ್ರ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.
ಪೆರಿಬೈಲ್, ಕುಂಪಲ, ಮೂರುಕಟ್ಟೆ, ಕೊಲ್ಯ, ಬಗಂಬಿಲ ಹಾಗೂ ಉಚ್ಚಿಲ ಪ್ರದೇಶಗಳಲ್ಲಿ ಈ ಕಾಮಗಾರಿ ಕೈಗೊಳ್ಳಲಾಗುತ್ತದೆ. ಮಂಗಳೂರು ನಗರದ ಕುದ್ರೋಳಿ-ಬಿಜೈ-ಕೆಎಸ್ಸಾರ್ಟಿಸಿ-ಉರ್ವ ಸ್ಟೋರ್ ಪ್ರದೇಶಗಳಲ್ಲಿ 67 ಕೋಟಿ ರೂ. ಹಾಗೂ ವಿಮಾನ ನಿಲ್ದಾಣ ಮಾರ್ಗದಲ್ಲಿ 51 ಕೋಟಿ ರೂ. ವೆಚ್ಚದಲ್ಲಿ ಭೂಗತ ಕೇಬಲ್ ಅಳವಡಿಕೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಉಳ್ಳಾಲ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎಚ್‌ಟಿ ಮತ್ತು ಎಲ್‌ಟಿ ಲೈನ್‌ಗಳನ್ನು ಭೂಗತ ಕೇಬಲ್ ಆಗಿ ಪರಿವರ್ತಿಸಲಾಗುವುದು. ಜೊತೆಗೆ ಪ್ರವಾಹ ಪೀಡಿತ ಭಾಗಗಳಲ್ಲಿ ಎಬಿ ಕೇಬಲ್ ಅಳವಡಿಸಲಾಗುತ್ತದೆ. ಈ ಕಾಮಗಾರಿಗಳನ್ನು ಪೂರ್ಣಗೊಳಿಸಲು 24 ತಿಂಗಳ ಗಡುವು ನಿಗದಿಯಾಗಿದೆ. ದುಬಾರಿ ವೆಚ್ಚ ಇದ್ದರೂ ಮಳೆಗಾಲದಲ್ಲಿ ವಿದ್ಯುತ್ ವ್ಯತ್ಯಯ ಕಡಿಮೆ ಮಾಡುವುದರ ಜೊತೆಗೆ ನಗರ ಸೌಂದರ್ಯಕ್ಕೂ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಮೆಸ್ಕಾಂ ಅಧಿಕಾರಿಗಳು ಈಗಾಗಲೇ ವಿವಿಧ ನಗರಗಳಲ್ಲಿ ಭೂಗತ ಕೇಬಲ್ ಕಾಮಗಾರಿ ಮುಂದುವರಿದಿದ್ದು, ಸಾವಿರ ಕಿಲೋಮೀಟರ್‌ಗೂ ಹೆಚ್ಚು ವ್ಯಾಪ್ತಿಯಲ್ಲಿ ಕೆಲಸ ಪೂರ್ಣಗೊಂಡಿದೆ. ಕಡಲ್ಕೊರೆತ ತಡೆಗೆ ಶಾಶ್ವತ ಯೋಜನೆ ರೂಪಿಸುವ ಕಾರ್ಯ ಪ್ರಗತಿಯಲ್ಲಿದ್ದು, ಅಪಾಯ ಪ್ರದೇಶಗಳಲ್ಲಿ ಈಗಾಗಲೇ ತಡೆಗೋಡೆ ನಿರ್ಮಾಣ ಮಾಡಲಾಗಿದೆ ಎಂದು ಖಾದರ್ ಹೇಳಿದರು.













