
ಹುಬ್ಬಳ್ಳಿ: ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು ಈ ವೇಳೆ ಭ್ರಷ್ಟ ಕುಟುಂಬದ ಮಾತು ಕೇಳಿ ನನ್ನನ್ನ ಉಚ್ಚಾಟನೆ ಮಾಡಲಾಗಿದೆ ಎಂದು ಆರೋಪಿಸಿದರು.
ನಾನೇನು ಭ್ರಷ್ಟಾಚಾರ ಮಾಡಿಲ್ಲ, ಅಡ್ಡ ಮತದಾನ ಮಾಡಿಲ್ಲ. ಎಲ್ಲಾ ಸಮುದಾಯದ ಯುವಕರು ರಸ್ತೆಗೆ ಬಂದು ನನ್ನ ಪರವಾಗಿ ಧ್ವನಿ ಎತ್ತುತ್ತಿದ್ದಾರೆ. ಹಿಂದುತ್ವದ ಪರವಾಗಿ ಮಾತನಾಡುತ್ತಿರುವವನ್ನು ತುಳಿಯುತ್ತಿದ್ದಾರೆ ಎಂಬ ಭಾವನೆ ಜನರಲ್ಲಿದೆ. ನನ್ನ ಪರವಾಗಿ ಮಾತನಾಡಿ, ಹೋರಾಟ ಮಾಡಿ ಎಂದು ನಾನು ಯಾರಿಗೂ ಹೇಳಿಲ್ಲ. ಇಡೀ ಹಿಂದು ಸಮಾಜ ನನ್ನ ಪರವಾಗಿ ಹೋರಾಟ ಮಾಡುತ್ತಿದೆ ಎಂದು ಹೇಳಿದರು.
ಮೀಸಲಾತಿಗಾಗಿ ಪಾದಯಾತ್ರೆ ಆರಂಭ ಮಾಡಿದಾಗ ನಾನೇ ಅದಕ್ಕೆ ಚಾಲನೆ ನೀಡಿದ್ದೆ. ಶನಿವಾರ ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ಮಾಡಿದ ಮಹಾನಾಯಕ ನಮ್ಮ ಸ್ವಾಮೀಜಿಗಳಿಗೆ ಹೋರಾಟ ಕೈ ಬಿಡಲು ಆಮಿಷ ತೋರಿಸಿದ್ದರು. ಸಮಾಜದ ವ್ಯಕ್ತಿಗಳಿಗೆ ಅನ್ಯಾಯ ಆದಾಗ ಸ್ವಾಮೀಜಿ ಹೋರಾಟ ಮಾಡಿದ್ದಾರೆ. ಪರೋಕ್ಷವಾಗಿ ಪಂಚಮಸಾಲಿ ಮುಖಂಡರಾದ ಮೋಹನ್ ಲಿಂಬಿಕಾಯಿ, ನೀಲಕಂಠ ಶೆಟ್ಟಿ, ಪ್ರಭಣ್ಣ ಹುಣಸಿಕಟ್ಟಿ ಮೇಲೆ ಹರಿಹಾಯ್ದ ಅವರು, ಮೋಹನ್ ಲಿಂಬಿಕಾಯಿ ಯಡಿಯೂರಪ್ಪನ ಚೇಲಾ ಎಂದು ಆಕ್ರೋಶ ಹೊರಹಾಕಿದರು.
ಯಡಿಯೂರಪ್ಪನವರನ್ನ ಮುಖ್ಯಮಂತ್ರಿ ಸ್ಥಾನದಿಂದ ಹೈಕಮಾಂಡ್ ಕೆಳಗೆ ಇಳಿಸಿದ್ದು ಏಕೆಂದರೆ ಅವರು ಮಾಡಿದ ಭ್ರಷ್ಟಾಚಾರ, ಚೆಕ್ ಮೂಲಕ ಲಂಚ ತೆಗೆದುಕೊಂಡಿದ್ದೆ ರಾಜೀನಾಮೆಗೆ ಕಾರಣ. ಅವರ ಸುಪುತ್ರ ವಿಜಯೇಂದ್ರ ಮಾಡಿದ ಹಗರಣದಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ನನ್ನನ್ನ ನೀವು ಹೊರಗಡೆ ಹಾಕಿರಬಹುದು. ರಾಜ್ಯದಲ್ಲಿ ಇವತ್ತು ಹಿಂದುತ್ವದ ನಾಯಕ ಬೇಕು ಎಂದು ಹೋರಾಟ ಮಾಡುತ್ತಿದ್ದಾರೆ ಎಂದು ಹೇಳಿದರು.