
ಬೆಂಗಳೂರು: ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಿಂದ ಎಚ್ಚೆತ್ತುಕೊಂಡ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಅರಣ್ಯ ನಾಶದಿಂದ ಉಂಟಾಗುವ ಭೂ ಕುಸಿತವನ್ನು ತಡೆಯುವ ಸಲುವಾಗಿ ರಾಜ್ಯದ ಪಶ್ಚಿಮ ಘಟ್ಟದ ಗಿರಿ ಪ್ರದೇಶ ವ್ಯಾಪ್ತಿಯಲ್ಲಿ 2015ರಿಂದೀಚೆಗೆ ಆಗಿರುವ ಅರಣ್ಯ ಒತ್ತುವರಿಯನ್ನು ಗುರುತಿಸಿ, ಶೀಘ್ರದಲ್ಲಿ ತೆರವು ಮಾಡುವಂತೆ ಅಪರ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚಿಸಿದ್ದಾರೆ.
ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು, ಚಾಮರಾಜನಗರ, ಬೆಳಗಾವಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಕೊಡಗು, ಹಾಸನ ಸೇರಿದಂತೆ ರಾಜ್ಯದ ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ 2015ರಿಂದೀಚೆಗೆ ಆಗಿರುವ ಎಲ್ಲ ಅರಣ್ಯ ಒತ್ತುವರಿ ಗುರುತಿಸಬೇಕು. ಅರಣ್ಯ ಪ್ರದೇಶದಲ್ಲಿ ಒತ್ತುವರಿ ಮಾಡಿ ನಿರ್ಮಿಸಲಾಗಿರುವ ಬಡಾವಣೆ, ಕೃಷಿ ಭೂಮಿ, ಹೋಂ ಸ್ಟೇ, ರೆಸಾರ್ಟ್ ಸೇರಿದಂತೆ ಎಲ್ಲ ರೀತಿಯ ಒತ್ತುವರಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೂಡಲೇ ಒತ್ತುವರಿ ತೆರವು ಮಾಡಬೇಕು ಹಾಗೂ 1 ತಿಂಗಳೊಳಗಾಗಿ ಅದಕ್ಕೆ ಕೈಗೊಂಡಿರುವ ಕ್ರಮದ ಕುರಿತಂತೆ ವರದಿ ಸಲ್ಲಿಸಬೇಕು ಎಂದು ಆದೇಶಿಸಿದ್ದಾರೆ.
ಬೃಹತ್ ಮರಗಳ ಕಡಿತ, ಅವೈಜ್ಞಾನಿಕವಾಗಿ ಗುಡ್ಡ ಕತ್ತರಿಸಿರುವುದರಿಂದ ಅರಣ್ಯ ಪ್ರದೇಶದ ಮಣ್ಣು ಸಡಿಲಗೊಂಡು ಭೂ-ಕುಸಿತದಂತಹ ಪ್ರಕರಣ ಸಂಭವಿಸುವ ಆತಂಕ ಎದುರಾಗಿದೆ. ಈ ಕುರಿತಂತೆ ತಜ್ಞರೂ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅದಕ್ಕೆ ಈಗಲೇ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದ್ದಾರೆ. ಹೀಗಾಗಿ ಮುಂದಿನ ಒಂದು ತಿಂಗಳೊಳಗಾಗಿ ಪಶ್ಚಿಮಘಟ್ಟ ಪ್ರದೇಶದಲ್ಲಿನ ಒತ್ತುವರಿ ಗುರುತಿಸಿ, ಅದನ್ನು ತೆರವಿಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಣೆ ನೀಡುವಂತೆ ಸೂಚನೆ ನೀಡಿದ್ದಾರೆ.











