
ಬ್ರಹ್ಮಾವರ: ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಅವರು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ನಡೆದಿದ್ದ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಎಸಗಿದ ಆರೋಪದಡಿ ಎಸ್ಐ ಸೇರಿದಂತೆ ಇಬ್ಬರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಬ್ರಹ್ಮಾವರ ಪೊಲೀಸರು ಕೇರಳದ ಕೊಲ್ಲಂ ಮೂಲದ ಆರೋಪಿ ಬಿಜು ಮೋನು (45)ನನ್ನು ಚೇರ್ಕಾಡಿ ಗ್ರಾಮದ ಮಹಿಳೆಗೆ ಕಿರುಕುಳ ನೀಡಿದ ಆರೋಪದಡಿ ಠಾಣೆಗೆ ಕರೆದುಕೊಂಡು ಬಂದು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.
ಇದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವಾಗ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಪೂರ್ಣವಾಗಿ ಪಾಲಿಸದ ಬ್ರಹ್ಮಾವರ ಪೊಲೀಸ್ ಠಾಣೆಯ ಉಪನಿರೀಕ್ಷಕ ಮಧು ಬಿ.ಇ ಮತ್ತು ಪ್ರಭಾರ ಠಾಣಾಧಿಕಾರಿಯಾಗಿರುವ ಹೆಡ್ ಕಾನ್ಸ್ಟೇಬಲ್ ಸುಜಾತ ಅವರನ್ನು ಅಮಾನತು ಮಾಡಿದ್ದಾರೆ.



















