
ಜಗತ್ತಿನಲ್ಲಿ ಮಾನವನಿಗೆ ಆರೋಗ್ಯ ಹೊಂದಿದ್ದರೆ ಏನನ್ನು ಬೇಕಾದರೂ ಸಾಧಿಸುವ ಶಕ್ತಿ ಇರುತ್ತದೆ ಎಂದು ಮುಂಬೈ ಬ್ಯಾಂಕ್ ನಿವೃತ್ತ ಅಧಿಕಾರಿ ಶ್ರೀಮತಿ ವಿಜಯ ಪ್ರಭು ನುಡಿದರು ಅವರು ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಅನಂತಶಯನದ ಶಾರದಾ ಮಹಿಳಾ ಮಂಡಳಿ ಯವರು ಹಮ್ಮಿಕೊಂಡ ಆರೋಗ್ಯ ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ನಮ್ಮ ದೇಹದಲ್ಲಿ ನಕಾರಾತ್ಮಕ ಶಕ್ತಿ ಕಳೆದು ಹೋಗಬೇಕಾದರೆ ಸಕಾರಾತ್ಮಕ ಶಕ್ತಿಯನ್ನು ಪಡೆದುಕೊಳ್ಳಬೇಕು. ನೆತ್ತಿಯ ಮೇಲಿನ ಚಕ್ರದೊಂದಿಗೆ ಆರಂಭವಾಗುವ ಸಕಾರಾತ್ಮಕ ಅಥವಾ ದೈವಿಕ ಬೆಳಕು ನಮ್ಮ ದೇಹದ ಏಳು ಚಕ್ರಗಳನ್ನು ದಾಟಿ ಕೊನೆಗೆ ಪಾದಗಳ ಕೆಳಗೆ ಬರುವಾಗ ನಕಾರಾತ್ಮಕ ಭಾವನೆಗಳು ಇಳಿದು ಹೋಗುತ್ತದೆ ಎಂಬುದನ್ನು ಪ್ರಾತ್ಯಕ್ಷಿಕೆಯ ಮೂಲಕ ಸದಸ್ಯರಿಗೆ ಮಾಹಿತಿ ನೀಡಿದರು.
ಯಾವುದೇ ಔಷಧವಿಲ್ಲದೆ ಪತ್ಯವಿಲ್ಲದೆ ಆಹಾರವಿಲ್ಲದೆ ಕೇವಲ ಮುದ್ರೆಗಳನ್ನು ಮಾಡುವುದರ ಮೂಲಕ ಹೇಗೆ ನಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂಬುದನ್ನು ಮುದ್ರೆಗಳ ಪ್ರಾತ್ಯಕ್ಷಿಕೆಯೊಂದಿಗೆ ವಿವರಿಸಿದರು. ಅಧಿಕ ಸಂಖ್ಯೆಯಲ್ಲಿ ಸೇರಿದ ಸದಸ್ಯರು ಬಹಳ ಆಸಕ್ತಿಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೊನೆಗೆ ಪ್ರಶ್ನೋತ್ತರಗಳ ಮೂಲಕ ತಮ್ಮ ಸಂದೇಹಗಳನ್ನು ನಿವಾರಿಸಿಕೊಂಡರು.
ಸ್ವರ್ಣ ಬಳಗದ ಶ್ರೀಮತಿ ಮಲ್ಲಿಕಾ ಹೆಬ್ಬಾರ್ ನಿರ್ವಹಿಸಿದ ಕಾರ್ಯಕ್ರಮದ ಆರಂಭದಲ್ಲಿ ಶ್ರೀಮತಿ ಶಾರ್ವರಿ ಉಪಾಧ್ಯಾಯ ಮತ್ತು ಶ್ರೀಮತಿ ಯಶಸ್ವಿನಿ ಅಶ್ವಿನ್ ರಾವ್ ಪ್ರಾರ್ಥನೆ ಮಾಡಿದರು. ಮಂಡಲದ ಅಧ್ಯಕ್ಷೆ ಶ್ರೀಮತಿ ಸಾವಿತ್ರಿ ಮನೋಹರ್ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಸಂಪನ್ಮೂಲ ವ್ಯಕ್ತಿಯನ್ನು ಹಾಗೂ ಸರ್ವರನ್ನು ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿಗೆ ಹಂಸಾಯನ ಪುಸ್ತಕ ಮತ್ತು ಪುಷ್ಪಗಳೊಂದಿಗೆ ಸ್ವಾಗತಿಸಲಾಯಿತು.
ಪ್ರತೀಕ್ಷೆಗೆ ಕಾರ್ಯಕ್ರಮವನ್ನು ದೀಪ ಬೆಳಗುವುದರೊಂದಿಗೆ ಉದ್ಘಾಟಿಸಿದ ಶ್ರೀಮತಿ ವಿಜಯ ಪ್ರಭು ಅವರು ಮಂಡಲದ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು. ಶ್ರೀಮತಿ ವತ್ಸಲ ಶಾನ್ಬೋಗ್ ಸಂಪನ್ಮೂಲ ವ್ಯಕ್ತಿಯ ಪರಿಚಯ ನೀಡಿದರು.
ಶ್ರೀಮತಿ ಸುಧಾ ರಾವ್ ,ಶ್ರೀಮತಿ ಇಂದುಮತಿ ಮತ್ತು ಶ್ರೀಮತಿ ರಾಧಿಕಾ ರಾವ್ ಅತಿಥಿಗಳಿಗೆ ಹೂ ನೀಡಿ ಗೌರವಿಸಿದರು.
ತಿಂಗಳ ಅದೃಷ್ಟವಂತ ಮಹಿಳೆಯಾಗಿ ಆಯ್ಕೆಯಾದ ಶ್ರೀಮತಿ ಇಂದುಮತಿಯವರಿಗೆ ಅಧ್ಯಕ್ಷರು ಬಹುಮಾನ ನೀಡಿದರು. ಸಂಪನ್ಮೂಲ ವ್ಯಕ್ತಿಯನ್ನು ಗೌರವ ಸ್ಮರಣಿಕೆ ಇತ್ತು ಪುರಸ್ಕರಿಸಲಾಯಿತು.
ಕಾರ್ಯದರ್ಶಿ ಶ್ರೀಮತಿ ಹರ್ಷಕಾಮತ್ ಧನ್ಯವಾದ ಇತ್ತರು. ರಾಷ್ಟ್ರಗೀತೆಯ ನಂತರ ಲಘು ಉಪಹಾರ ಏರ್ಪಡಿಸಲಾಗಿತ್ತು.













