
ಮೈಸೂರು: ಸಿಎಂ ಸಿದ್ದರಾಮಯ್ಯ ಮೈಸೂರಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ‘ಪ್ರಧಾನಿ ನರೇಂದ್ರ ಮೋದಿ ಮಣಿಪುರದಲ್ಲಿ ಗಲಭೆ ನಡೆಯುವ ಸಂದರ್ಭದಲ್ಲಿ ಭೇಟಿ ನೀಡದೆ, ಜನರ ಕಷ್ಟ ಆಲಿಸದೆ ವಿರೋಧ ಪಕ್ಷದವರ ಒತ್ತಡದಿಂದ ಮೂರು ವರ್ಷಗಳ ನಂತರ ಭೇಟಿ ನೀಡಿದ್ದಾರೆ’ ಎಂದು ಹೇಳಿದರು.
ಬಿಜೆಪಿ ನಾಯಕರಾದ ಸಿ.ಟಿ ರವಿ, ಬಸನಗೌಡ ಪಾಟೀಲ್ ಯತ್ನಾಳ್ ಅವರು ಹಿಂಸೆಗೆ ಪ್ರಚೋದನೆ ನೀಡುವ ಹೇಳಿಕೆ ನೀಡಿದ ಕಾರಣಕ್ಕಾಗಿ ಅವರ ಮೇಲೆ ಎಫ್ಐಆರ್ ದಾಖಲಾಗಿದೆ. ಬಿಜೆಪಿಯವರು ಪ್ರಚೋದನಕಾರಿ ಭಾಷಣ ಮಾಡಿದರೆ ಸರ್ಕಾರ ಕೈಕಟ್ಟಿ ಕೂರಲು ಆಗುತ್ತದೆಯೇ? ಸಮಾಜದ ಶಾಂತಿ ನೆಮ್ಮದಿಯನ್ನು ಕಾಪಾಡುವುದಕ್ಕಾಗಿ ಪ್ರಚೋದನಕಾರಿ ಭಾಷಣ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ನಾವು ಯಾರನ್ನು ಟಾರ್ಗೆಟ್ ಮಾಡಿಲ್ಲ, ನಾನು ಕೂಡ ಒಬ್ಬ ಹಿಂದೂ. ನನ್ನ ಹೆಸರಿನಲ್ಲಿ ‘ರಾಮ’ ಮತ್ತು ‘ಈಶ್ವರ’ ಎರಡೂ ದೇವರ ಹೆಸರಿದೆ ಎಂದು ಹೇಳಿದರು.













