
ವಯನಾಡ್: ಮಳೆಯ ಆರ್ಭಟಕ್ಕೆ ಭೂಕುಸಿತದಿಂದ ಕೇರಳದ ವಯನಾಡು ತತ್ತರಿಸಿ ಹೋಗಿದ್ದು ಅವಶೇಷಗಳ ಅಡಿಯಿಂದ ಬದುಕಿ ಬರುತ್ತಿರುವವರಿಗೆ ಚಿಕಿತ್ಸೆ ನೀಡಿ ಹಾಗೂ ಮೃತ ದೇಹಗಳ ಮರಣೋತ್ತರ ಪರೀಕ್ಷೆ ಮಾಡಿ ಮಾಡಿ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರು ಬೇಸತ್ತು ಹೋಗಿದ್ದಾರೆ.
ತಮಗಾದ ಅನುಭವವನ್ನು ಹಂಚಿಕೊಂಡಿರುವ ಮರಣೋತ್ತರ ಪರೀಕ್ಷಾ ವಿಭಾಗದ ಸರ್ಕಾರಿ ವೈದ್ಯರೊಬ್ಬರು ‘ನನ್ನ ಇದುವರೆಗಿನ ವೃತ್ತಿ ಜೀವನದಲ್ಲಿ ಎಂದೂ ನೋಡಿರದ ರೀತಿಯಲ್ಲಿ ದೇಹಗಳು ಜಜ್ಜಿಹೋಗಿದ್ದವು. ನಾನು ಇದಕ್ಕೆ ತಯಾರಿರಲಿಲ್ಲ. ಬದುಕುಳಿದವರಿಗೆ ಚಿಕಿತ್ಸೆ ಕೊಡುವ ಆಸ್ಪತ್ರೆಗೆ ಓಡಿಹೋಗಬೇಕೆನಿಸಿತು, ಆದರೆ ಅದಕ್ಕೆ ಅವಕಾಶವಿರದೆ, 18 ಮರಣೋತ್ತರ ಪರೀಕ್ಷೆಗಳನ್ನು ಮಾಡಿದೆ’ ಎಂದು ಕಣ್ಣೀರಿಟ್ಟಿದ್ದಾರೆ.
ರಾಜ್ಯದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾತನಾಡಿ, ‘ಮುಂಜಾನೆ 7ರ ತನಕ 256 ಶವಪರೀಕ್ಷೆಗಳನ್ನು ನಡೆಸಲಾಗಿದ್ದು, ಅದರಲ್ಲಿ ಕೆಲವು ಇಡೀ ದೇಹಗಳು ಹಾಗೂ ದೇಹದ ಕೆಲ ಭಾಗಗಳು ಸೇರಿವೆ. ಅವುಗಳಲ್ಲಿ 154 ದೇಹಗಳನ್ನು ಜಿಲ್ಲಾಡಳಿತಕ್ಕೆ ಕೊಡಲಾಗಿದೆ. ಬುಧವಾರದ ರಾತ್ರಿಯೊಂದರಲ್ಲೇ 100ಕ್ಕೂ ಅಧಿಕ ಶವಗಳನ್ನು ಪರೀಕ್ಷಿಸಲಾಗಿದೆ. ಆರೋಗ್ಯ ಕಾರ್ಯಕರ್ತರು ಮನೆಗೆ ಹೋಗದೆ ದುಡಿಯುತ್ತಿದ್ದಾರೆ’ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.











