
ಬೆಂಗಳೂರು: ಡಿ.ಕೆ. ಶಿವಕುಮಾರ್ ನೇತೃತ್ವದ ಹೊಸ ಸಚಿವ ಸಂಪುಟದಲ್ಲಿ ಭ್ರಷ್ಟಾಚಾರ ಆರೋಪ ಎದುರಿಸಿದವರಿಗೆ ಸ್ಥಾನ ನೀಡಲಾಗಿದ್ದು, ಕೆಲವರು ಹಣದ ಪ್ರಭಾವದಿಂದ ಸಚಿವರಾಗಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟರ ₹180 ಕೋಟಿ ಹಗರಣದ ಆರೋಪ ಎದುರಿಸಿದ್ದ ಬಿ. ನಾಗೇಂದ್ರ ಮತ್ತೆ ಸಚಿವರಾಗಿರುವುದನ್ನು ಪ್ರಶ್ನಿಸಿ, ಅವರಿಗೆ ಕ್ಲೀನ್ ಚಿಟ್ ನೀಡಿದ್ದು ಯಾರು ಎಂದು ಕೇಳಿದರು.
ಹೊಸ ಮುಖ್ಯಮಂತ್ರಿ ಹಳೆಯ ಸಚಿವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಂಡಿದ್ದು, ಕರಾವಳಿ ಹಾಗೂ ಮಲೆನಾಡು ಭಾಗಕ್ಕೆ ಸಮರ್ಪಕ ಪ್ರಾತಿನಿಧ್ಯ ನೀಡಿಲ್ಲ. ಆ ಭಾಗದಲ್ಲಿ ಕಾಂಗ್ರೆಸ್ ಹೇಗಿದ್ದರೂ ಸೋಲಲಿದ್ದೇವೆ ಎಂಬುದನ್ನು ಈಗಾಗಲೇ ಒಪ್ಪಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಯಾದಗಿರಿ, ರಾಯಚೂರು, ವಿಜಯನಗರ, ಕೋಲಾರ ಹಾಗೂ ಚಿಕ್ಕಬಳ್ಳಾಪುರದಂತಹ ಹಿಂದುಳಿದ ಜಿಲ್ಲೆಗಳಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಹಲವು ಸಮುದಾಯಗಳಿಗೂ ಪ್ರಾತಿನಿಧ್ಯ ನೀಡಿಲ್ಲ ಎಂದು ಟೀಕಿಸಿದರು.
ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡಿದರೆ ಕೇಸು ದಾಖಲಿಸುತ್ತಾರೆ. ಆದರೆ ಈಗ ಅನೇಕ ಕಡೆ ಕಾಂಗ್ರೆಸ್ ಕಾರ್ಯಕರ್ತರೇ ಕೈಗೇ ಏನೇನೂ ತೆಗೆದುಕೊಂಡು ಸಿಎಂ ಭಾವಚಿತ್ರಕ್ಕೆ ಹೊಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದರು.
ಸಂಪುಟದಲ್ಲಿ ಹೊಸ ಮುಖಗಳಿಗಿಂತ ಹಳೆಯವರೇ ಹೆಚ್ಚಿದ್ದು, ಭ್ರಷ್ಟಾಚಾರ ಆರೋಪ ಎದುರಿಸಿದವರನ್ನೇ ಮತ್ತೆ ಸಚಿವರನ್ನಾಗಿ ಮಾಡಲಾಗಿದೆ. ಇದು ಸಿಎಂ ಡಿ.ಕೆ.ಶಿವಕುಮಾರ್ ಅವರ ಪಟ್ಟಿಯಲ್ಲ, ಪೇಮೆಂಟ್ ಲಿಸ್ಟ್ ಎಂದು ತಿಳಿದುಬಂದಿದೆ. ಏಕೆಂದರೆ ದಿಢೀರನೆ ಮಂಕಾಳು ವೈದ್ಯ ಅವರ ಹೆಸರು ತೆಗೆದುಹಾಕಿ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಹೆಸರು ಸೇರಿಸಿರುವುದು ಕಾಂಚಾಣದ ಮಹಿಮೆ ಎಂದು ತಿಳಿಯುತ್ತದೆ ಎಂದಿದ್ದಾರೆ.
ಸಚಿವ ಸಂಪುಟದಲ್ಲಿ ಒಬ್ಬ ಮಹಿಳೆಗೂ ಅವಕಾಶ ನೀಡದಿರುವುದನ್ನು ಟೀಕಿಸಿದ ಅವರು, ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಿದ ಕಾಂಗ್ರೆಸ್ ಹೈಕಮಾಂಡ್ ಈಗ ಒಬ್ಬ ಮಹಿಳೆಗೂ ಅವಕಾಶ ನೀಡಿಲ್ಲ ಎಂದು ಹೇಳಿದ್ದಾರೆ.
ಸಚಿವರ ಆಯ್ಕೆಯಲ್ಲಿ ಮುಖ್ಯಮಂತ್ರಿಗೆ ಸಂಪೂರ್ಣ ಸ್ವಾತಂತ್ರ್ಯ ಇರಲಿಲ್ಲ, ಅವರು ಕೇವಲ ‘ರಬ್ಬರ್ ಸ್ಟಾಂಪ್’ ಸಿಎಂ ಆಗಿದ್ದಾರೆ ಎಂದು ಆರ್. ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

























































