
ಕಾರ್ಕಳ: ಭುವನೇಂದ್ರ ಕಾಲೇಜಿನ ಲಲಿತಕಲಾ ಸಂಘದ ವತಿಯಿಂದ ನಡೆದ “ಎಕ್ಟ್ಸ್ರಾವೆಗಾಂಝ” ಸ್ಪರ್ಧೆಗಳ ಸಮಾರೋಪ ಸಮಾರಂಭ ನಡೆಯಿತು. ಮುಖ್ಯ ಅತಿಥಿಗಳಾದ ಎಸ್.ಎನ್.ವಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಪ್ರದೀಪ್ ಕುಮಾರ್ ಅವರು ಮಾತನಾಡುತ್ತಾ, ವಿದ್ಯಾರ್ಥಿಗಳು ವೇದಿಕೆಯ ಮೇಲೆ ಪ್ರಸ್ತುತ ಪಡಿಸುವ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪ್ರಯತ್ನದಿಂದ ಸೋತರೂ ಕೂಡಾ ಯಾವತ್ತಾದರೊಂದು ದಿನ ಫಲಿತಾಂಶವನ್ನು ಕೊಟ್ಟೇ ಕೊಡುತ್ತದೆ. ನಾವು ಸದಾ ಭರವಸೆಯಿಡಬೇಕು ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹೇಳಿದರು.

ಸರಕಾರಿ ಪದವಿಪೂರ್ವ ಕಾಲೇಜು, ಸಾಣೂರು ಇಲ್ಲಿನ ಪ್ರಾಚಾರ್ಯರಾದ ಶ್ರೀಮತಿ ಸುಚೇತ ಕಾಮತ್ ಮಾತನಾಡಿ ಈ ಕಾಲೇಜು ಕೊಟ್ಟ ಉತ್ತೇಜನದಿಂದ ನಮ್ಮ ವಿದ್ಯಾರ್ಥಿಗಳಿಗೂ ಉಪಕಾರವಾಗಿದೆ. ಇಂತಹ ಭರವಸೆಯನ್ನು ಹೆಚ್ಚಿಸುವ ಕೆಲಸವನ್ನು ಈ ಸ್ಪರ್ಧೆಗಳೂ ಮಾಡುತ್ತಿವೆ. ಅನ್ನುವುದು ಸಂತೋಷದ ಸಂಗತಿ ಎಂದರು.
ಕಾಲೇಜಿನ ಪ್ರಾಚಾರ್ಯರಾದ ಡಾ. ಮಂಜುನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಿ ಪಿಯುಸಿಯಲ್ಲಿ ಕೊಟ್ಟ ಸಂಸ್ಕಾರವೇ ನಮ್ಮ ಪದವಿ ಕಾಲೇಜಿಗೆ ಸ್ಪರ್ಧೆಯ ರೂಪದಲ್ಲಿ ಬಂದಿದೆ. ಇದು ಸಂಸ್ಥೆಯಿಂದ ಸಂಸ್ಥೆಗೆ ಇರುವ ಬಾಂಧವ್ಯವನ್ನು ಹೆಚ್ಚಿಸುವ ಕೆಲಸವನ್ನು ಮಾಡುತ್ತಿದೆ. ಕಲೆ, ಸಾಹಿತ್ಯದಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಂಡಾಗ ಅಂತಃಶಕ್ತಿ ಸದಾ ಜಾಗೃತವಾಗುತ್ತದೆ. ದೃಷ್ಟಿಕೋನ ಸರಿಯಾಗಿದ್ದರೆ ಜೀವನದಲ್ಲಿ ಸಫಲತೆಯನ್ನು ಕಾಣಲು ಸಾಧ್ಯವಾಗುತ್ತದೆ ಎನ್ನುತ್ತಾ ಸ್ಪರ್ಧಾರ್ಥಿಗಳಿಗೆ ಶುಭ ಹಾರೈಸಿದರು.
ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಎಲ್ಲ ಅತಿಥಿಗಳೂ ಪಾಲ್ಗೊಂಡರು. ವೇದಿಕೆಯಲ್ಲಿ ಐಕ್ಯೂಎಸಿ ನಿರ್ದೇಶಕರಾದ ಪ್ರೊ ಎಚ್ ಜಿ ನಾಗಭೂಷಣ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ದತ್ತಾತ್ರೇಯ ಮಾರ್ಪಳ್ಳಿ, ಕಾರ್ಯಕ್ರಮದ ಸಂಯೋಜಕರಾದ ಪ್ರೊ. ನಂದಕಿಶೋರ್ ಕೆ, ಸಹ ಸಂಯೋಜಕರಾದ ಕ್ಯಾಪ್ಟನ್ ಶ್ರೀಮೂರ್ತಿ, ಮಹೇಶ್ ಶೆಟ್ಟಿ, ಶಿವಾನಂದ ನಾಯಕ್, ಹರೀಶ್ಚಂದ್ರ, ಮಹೇಶ್ ಪ್ರಭು, ರಾಮದಾಸ ಶೆಟ್ಟಿ, ವಿದುಷಿ ಸುಶ್ಮಿತಾ, ಮಾಸೂಮ್ ರಾಜ್, ಹರೀಶ್ ಮಲಾರ್ ಉಪಸ್ಥಿತರಿದ್ದರು.
ದ್ರವ್ಯ ಸ್ವಾಗತಿಸಿ, ಲಲಿತಕಲಾ ಸಂಘದ ಸಂಯೋಜಕರಾದ ಪ್ರೊ ನಂದಕಿಶೋರ್ ವಂದಿಸಿದರು. ಶ್ವೇತಾ ಕಾರ್ಯಕ್ರಮ ನಿರೂಪಿಸಿದರು. ತೀರ್ಪುಗಾರರಾದ ಶ್ರೀ ಹರೀಶ್ ಮಲಾರ್ ಸ್ಪರ್ಧೆಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.
“ಎಕ್ಟ್ಸ್ರಾವೆಗಾಂಝ” 2024 ರನ್ನರ್ ಅಪ್ ಪ್ರಶಸ್ತಿಯನ್ನು ಸರಕಾರಿ ಪದವಿಪೂರ್ವ ಕಾಲೇಜು ಬಜಗೋಳಿ ಪಡೆದುಕೊಂಡಿದ್ದು, ಸಮಗ್ರ ಪ್ರಶಸ್ತಿಯನ್ನು ಪಿ.ಎನ್.ಆರ್. ಅಮೃತಭಾರತಿ ಪದವಿಪೂರ್ವ ಕಾಲೇಜು ಹೆಬ್ರಿ ಹಾಗೂ ಶ್ರೀ ಭುವನೇಂದ್ರ ಪದವಿಪೂರ್ವ ಕಾಲೇಜು ಕಾರ್ಕಳ ಹಂಚಿಕೊಂಡಿದೆ.



















