
ನವದೆಹಲಿ ಪತಂಜಲಿ ಕಂಪನಿಯ ಸಂಸ್ಥಾಪಕ ಬಾಬಾ ರಾಮದೇವ್ ಮತ್ತು ಕಂಪನಿಯ ಸಿಇಒ ಹಾಗೂ ಚೇರ್ಮನ್ ಆಚಾರ್ಯ ಬಾಲಕೃಷ್ಣ ಇಬ್ಬರ ವಿರುದ್ಧ ದಾರಿ ತಪ್ಪಿಸುವ ಜಾಹೀರಾತುಗಳನ್ನು ಪ್ರಸಾರಗೊಳಿಸುತ್ತಿರುವುದರಿಂದ ಇಬ್ಬರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿತ್ತು. ಇದೀಗ ಇಬ್ಬರೂ ನಾವು ಇನ್ನು ಮುಂದೆ ದಾರಿ ತಪ್ಪಿಸುವ ಯಾವುದೇ ಜಾಹೀರಾತುಗಳನ್ನು ಪ್ರಚಾರ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ರದ್ದು ಮಾಡಿದೆ.
ಭಾರತೀಯ ವೈದ್ಯಕೀಯ ಸಂಘವು ಪತಂಜಲಿ ತನ್ನ ಜಾಹೀರಾತುಗಳಲ್ಲಿ ಅಲೋಪತಿ ವಿರುದ್ಧ ತಪ್ಪು ಮಾಹಿತಿ ಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು ಈ ಸಂಬಂಧ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಜಾಹೀರಾತುಗಳ ವಿರುದ್ಧ ಆದೇಶ ಹೊರಡಿಸಿತ್ತು ಆದರೆ ಪತಂಜಲಿ ಕಂಪನಿಯು ಇದನ್ನು ಉಲ್ಲಂಘಿಸಿದ್ದು ಇದರಿಂದ ಆಕ್ರೋಶಗೊಂಡ ನ್ಯಾಯಾಲಯವು ನ್ಯಾಯಾಂಗ ನಿಂದನೆ ನೋಟಿಸ್ ನೀಡಿದ್ದಲ್ಲದೆ ದಾರಿ ತಪ್ಪಿಸುವ ಜಾಹೀರಾತುಗಳನ್ನು ಸಹಿಸಲಾಗುವುದಿಲ್ಲ ಎಂದು ನ್ಯಾಯಮೂರ್ತಿ ಅಮಾನುಲ್ಲಾ ಅವರು ಎಚ್ಚರಿಕೆ ನೀಡಿದ್ದರು.
ಮಾರ್ಚ್ 21ರಂದು ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಆಚಾರ್ಯ ಬಾಲಕೃಷ್ಣ ಅವರು ಸುಪ್ರೀಂಕೋರ್ಟಿಗೆ ಅಫಿಡೆವಿಟ್ ಸಲ್ಲಿಸಿ ತಮ್ಮ ತಪ್ಪು ಜಾಹಿರಾತುಗಳ ಬಗ್ಗೆ ಪಶ್ಚಾತಾಪ ವ್ಯಕ್ತಪಡಿಸಿ ಕ್ಷಮೆ ಕೇಳಿದ್ದರು. ಆಯುರ್ವೇದ ಮೂಲಕ ಜೀವನಶೈಲಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳನ್ನು ಒದಗಿಸುವ ಮೂಲಕ ದೇಶದ ಆರೋಗ್ಯ ಮೂಲಸೌಕರ್ಯದ ಮೇಲಿನ ಹೊರೆಯನ್ನು ಕಡಿಮೆ ಮಾಡುವುದು ನಮ್ಮ ಪತಂಜಲಿ ಕಂಪನಿಯ ಅನ್ವೇಷಣೆಯಾಗಿದ್ದು ಆದರೆ ಇನ್ನು ಮುಂದೆ ಇಂತಹ ತಪ್ಪು ಜಾಹಿರಾತುಗಳನ್ನು ಪ್ರಕಟಿಸುವುದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ರಾಮದೇವ್ ಕೂಡ ಕೋರ್ಟ್ ಮುಂದೆ ಕ್ಷಮೆ ಯಾಚಿಸಿದ್ದು ಇದೀಗ ಇಬ್ಬರು ಮುಚ್ಚಳಿಕೆ ಬರೆದು ಕೊಟ್ಟ ಹಿನ್ನಲೆಯಲ್ಲಿ ಪ್ರಕರಣ ರದ್ದು ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.













