
ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಮಣ್ಯದಿಂದ ಹಿಡಿದು ಕೈಕಂಬದವರೆಗಿನ ರಸ್ತೆಯು ಗುಂಡಿಗಳಿಂದ ತುಂಬಿಕೊಂಡಿದ್ದು ರಸ್ತೆ ರಿಪೇರಿ ಮಾಡುವಂತೆ ಮನವಿ ಮಾಡಿದರೂ ಸಂಬಂಧಪಟ್ಟವರು ಗಮನವೇ ಹರಿಸುತ್ತಿಲ್ಲ. ಇದರಿಂದ ಬೇಸತ್ತ ಅಲ್ಲಿನ ಜನ ಇದಕ್ಕೆ ಸಂಬಂಧಪಟ್ಟವರು ಆದಷ್ಟು ಬೇಗ ಕಣ್ತೆರೆಯಲಿ ಎಂದು ರಸ್ತೆಯ ಪಕ್ಕದಲ್ಲಿಯೇ ನಿಧಿ ಹುಡುಕುವ ಸಲುವಾಗಿ ರಾಜ್ಯ ಸರ್ಕಾರ ಅಲ್ಲಲ್ಲಿ ರಸ್ತೆ ಮಧ್ಯೆ ಗುಂಡಿ ತೋಡಿ ಹಾಗೇ ಬಿಟ್ಟಿವೆ ಹಾಗಾಗಿ ವಾಹನ ಸವಾರರು ನಿಧಾನವಾಗಿ ಚಲಿಸಿ ಎಂಬ ಎಚ್ಚರಿಕೆಯ ಫಲಕವನ್ನು ಅಳವಡಿಸಿದ್ದಾರೆ.
ಈ ಕುರಿತ ಪೋಸ್ಟ್ ಒಂದನ್ನು mangalore_today_ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ವಾಹನ ಸವಾರರೇ ನಿಧಾನವಾಗಿ ಚಲಿಸಿ, ನಿಧಿ ಹುಡುಕಲು ರಾಜ್ಯ ಸರ್ಕಾರ ರಸ್ತೆ ಮಧ್ಯೆಯೇ ಅಲ್ಲಲ್ಲಿ ದೊಡ್ಡ ಹೊಂಡ ತೋಡಿದೆ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.
ಈ ಫೋಟೋದಲ್ಲಿ “ಎಚ್ಚರಿಕೆಯ ಫಲಕ; ಯಾರೋ ಮಾಂತ್ರಿಕರು ಕೈಕಂಬದಿಂದ-ಕುಕ್ಕೆ ಸುಬ್ರಮಣ್ಯವರೆಗಿನ ರಸ್ತೆಯಲ್ಲಿ ನಿಧಿ ಇದೆ ಎಂದು ಹೇಳಿದ ಕಾರಣ ಎಚ್ಚೆತ್ತ ರಾಜ್ಯ ಸರ್ಕಾರ ಈ ರಸ್ತೆಯಲ್ಲಿ ನಿಧಿಯನ್ನು ಹುಡುಕಿಸುವ ಕಾರಣದಿಂದ ಅಲ್ಲಲ್ಲಿ ರಸ್ತೆ ಮಧ್ಯೆಯೇ ದೊಡ್ಡ ಹೊಂಡಗಳನ್ನು ತೋಡಿಸಿ ಹಾಗೆಯೇ ಬಿಟ್ಟಿದ್ದಾರೆ, ಹಾಗಾಗಿ ನಿಧಾನವಾಗಿ ಚಲಿಸಿ” ಎಂಬ ಬರಹವನ್ನು ಬರೆದಿರುವುದನ್ನು ಗಮನಿಸಬಹುದಾಗಿದೆ.



















