
ಕಾರ್ಕಳ: ಇಲ್ಲಿನ ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಮೂಡಬಿದಿರೆಯ ಆಳ್ವಾಸ್ ಇಂಜಿನಿಯರಿAಗ್ ಕಾಲೇಜಿನ ಪ್ರಾಧ್ಯಾಪಕರಾದ ಡಾ. ವಿನಯ್ ಎಸ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು “ಭಾರತ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಅತ್ಯುನ್ನತ ಸ್ಥಾನದೆಡೆಗೆ ಮುನ್ನುಗುತ್ತಿದೆ. ಇಡೀ ಜಗತ್ತಿನ ಗಮನವನ್ನು ಬಾರತ ಸೆಳೆಯುತ್ತಿದೆ. ಇದಕ್ಕೆ ಕಾರಣ ನಮ್ಮ ಬಾರತದ ಪ್ರತಿಭಾನ್ವಿತ ವಿಜ್ಞಾನಿಗಳು. ಅದೇ ರೀತಿ ಪ್ರತಿ ಮಕ್ಕಳು ಪ್ರತಿಭಾಸಂಪನ್ನರಾಗಿ, ಭಾರತದ ಭವಿಷ್ಯದ ವಿಜ್ಞಾನಿಗಳಾದ್ದಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮೂಡಿಬರುವುದರಲ್ಲಿ ಯಾವುದೇ ಅನುಮಾನವಿಲ್ಲ” ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಡೊಮಿನಿಕ್ ಅಂದ್ರಾದೆ ಅವರು ಮಾತನಾಡಿ “ಮೊದಲು ಭೂಮಿಯನ್ನು ಉಳಿಸುವ ಕಡೆಗೆ ಗಮನ ಹರಿಸುವುದು ಈಗಿನ ಅಗತ್ಯತೆ, ಅದರೊಂದಿಗೆ ತಂತ್ರಜ್ಞಾನವನ್ನು ಬಳಸಿ ಮಕ್ಕಳಲ್ಲಿ ವಿಜ್ಞಾನದೊಂದಿಗೆ ಪರಿಸರ ಎನ್ನುವ ಮನೋಭಾವವಿರಬೇಕು” ಎಂದು ಹೇಳಿದರು. ಸಂಸ್ಥೆಯ ಪದವಿಪೂರ್ವ ವಿಭಾಗದ ಉಪಪ್ರಾಚಾರ್ಯರಾದ ಡಾ. ಪ್ರಕಾಶ್ ಭಟ್, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ರುಡಾಲ್ಫ್ ಕಿಶೋರ್ ಲೋಬೊ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಒಂಬತ್ತನೇ ತರಗತಿಯ ವಿದ್ಯಾರ್ಥಿನಿ ರೇಚಲ್ ಡಿ’ಸೋಜ ಸ್ವಾಗತಿಸಿ ಹತ್ತನೇ ತರಗತಿಯ ಸುಧೀಕ್ಷಾ ಕಾರ್ಯಕ್ರಮ ನಿರೂಪಿಸಿದರು. ಒಂಬತ್ತನೇ ತರಗತಿಯ ಶಹನುಂ ಫಾತಿಮಾ ವಂದಿಸಿದರು.













