
ಕಾರ್ಕಳ: ಮನೆಯ ಬಾವಿಗೆ ಬಿದ್ದಿದ್ದ ಬೆಕ್ಕನ್ನು ರಕ್ಷಿಸಲು ಹೋಗಿ ತಾವೂ ಬಾವಿಯಿಂದ ಮೇಲೆ ಬರಲಾಗದೆ ಸಿಲುಕಿಕೊಂಡಿದ್ದ ವ್ಯಕ್ತಿಯೊಬ್ಬರನ್ನು ಕಾರ್ಕಳ ಅಗ್ನಿಶಾಮಕ ದಳದ ಸಿಬ್ಬಂದಿ ಸಕಾಲದಲ್ಲಿ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ರಕ್ಷಿಸಿದ ಘಟನೆ ಇಲ್ಲಿನ ಬೈಪಾಸ್ ಬಳಿ ಸೋಮವಾರ (ಜೂ.15) ಬೆಳಗ್ಗೆ ನಡೆದಿದೆ.
ಇಲ್ಲಿನ ಬೈಪಾಸ್ ರಸ್ತೆಯ ನಿವಾಸಿ ನಾರಾಯಣ ಭಟ್ (48 ವ) ರಕ್ಷಿಸಲ್ಪಟ್ಟ ವ್ಯಕ್ತಿ. ಸೋಮವಾರ ಬೆಳಗ್ಗೆ ಸುಮಾರು 7ರ ಸುಮಾರಿಗೆ ಇವರ ಮನೆಯ ಬಾವಿಗೆ ಬೆಕ್ಕೊಂದು ಬಿದ್ದಿತ್ತು. ಇದನ್ನು ಗಮನಿಸಿದ ನಾರಾಯಣ ಭಟ್ ಅವರು ಬೆಕ್ಕನ್ನು ಮೇಲಕ್ಕೆತ್ತಲು ಸ್ವತಃ ಬಾವಿಗೆ ಇಳಿದಿದ್ದಾರೆ. ಆದರೆ ಬೆಕ್ಕನ್ನು ಹಿಡಿದ ನಂತರ ಅವರಿಗೆ ಬಾವಿಯಿಂದ ಮೇಲೆ ಬರಲು ಸಾಧ್ಯವಾಗದೆ ಒಳಗೆ ಸಿಕ್ಕಿ ಹಾಕಿಕೊಂಡಿದ್ದರು.
ಈ ವಿಷಯ ತಿಳಿಯುತ್ತಿದ್ದಂತೆ ಕಾರ್ಕಳ ಅಗ್ನಿಶಾಮಕ ದಳದ ಠಾಣಾಧಿಕಾರಿ ಚಂದ್ರಶೇಖರ್ ಅವರ ನೇತೃತ್ವದ ತಂಡ ತಕ್ಷಣವೇ ಸ್ಥಳಕ್ಕೆ ಧಾವಿಸಿತು. ಸಿಬ್ಬಂದಿ ರೂಪೇಶ್ ಅವರು ಬಾವಿಗಿಳಿದು ಜಾಗರೂಕತೆಯಿಂದ ನಾರಾಯಣ ಭಟ್ ಅವರನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದರು. ಇದೇ ವೇಳೆ ಬಾವಿಗೆ ಬಿದ್ದಿದ್ದ ಬೆಕ್ಕನ್ನೂ ಸಜೀವವಾಗಿ ರಕ್ಷಿಸಲಾಯಿತು.
ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಸಿಬಂದಿ ಭೀಮಪ್ಪ, ಗಣೇಶ್, ಸುರೇಶ್ ಹಾಗೂ ಚಾಲಕ ಮುಜಾಮೀರ್ ಸಹಕರಿಸಿದರು.

































