
ಹಾಸನ: ಕೆಲ ದಿನಗಳ ಹಿಂದಷ್ಟೇ ಪೊಲೀಸ್ ಅಕಾಡೆಮಿಲ್ಲಿ ತರಬೇತಿ ಮುಗಿಸಿ ಕರ್ತವ್ಯಕ್ಕೆ ಹಾಜರಾಗುವ ವೇಳೆ ಯುವ ಐಪಿಎಸ್ ಅಧಿಕಾರಿ ಹರ್ಷವರ್ದನ್ ಎಂಬವರು ಜೀಪ್ ಪಲ್ಟಿಯಾಗಿ ಸಾವಿಗೀಡಾದ ಘಟನೆ ನಡೆದಿದೆ. ಪ್ರಕರಣ ಸಂಬಂಧ ಹಾಸನ ಗೊರೂರು ಪೊಲೀಸ್ ಠಾಣೆಯಲ್ಲಿ ಜೀಪ್ ಚಾಲಕ ಮಂಜೇಗೌಡ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ವರದಿಯಾಗಿದೆ.
ಮೈಸೂರಿನಿಂದ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಬರುತ್ತಿದ್ದ ವೇಳೆ ಜೀಪ್ ಟಯರ್ ಸಿಡಿದು ವಾಹನ ಪಲ್ಟಿಯಾಗಿ ತೀವ್ರವಾಗಿ ಗಾಯಗೊಂಡಿದ್ದ 26 ವರ್ಷದ ಹರ್ಷವರ್ಧನ್ ಚಿಕಿತ್ಸೆ ಫಲಕಾರಿಯಾಗದೇ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ನಿನ್ನೆಯಷ್ಟೇ ಮೈಸೂರಿನ ಪೊಲೀಸ್ ಅಕಾಡೆಮಿಯಲ್ಲಿ ಟ್ರೇನಿಂಗ್ ಮುಗಿಸಿದ್ದ ಹರ್ಷವರ್ಧನ್ ಇವತ್ತು ಹಾಸನದಲ್ಲಿ ಡಿವೈಎಸ್‌ಪಿಯಾಗಿ ಚಾರ್ಜ್ ತೆಗೆದುಕೊಳ್ಳಬೇಕಿತ್ತು. ಐಜಿಪಿ ಬೋರಲಿಂಗಯ್ಯ ರಿಪೋರ್ಟ್ ಮಾಡಿಕೊಂಡು ಹಾಸನಕ್ಕೆ ಜೀಪ್‌ನಲ್ಲಿ ಬರುತ್ತಿದ್ದಾಗ ಹಾಸನದ ಕಿತ್ತಾನೆ ಗ್ರಾಮದ ಬಳಿ ಈ ದುರ್ಘಟನೆ ನಡೆದಿದೆ. ಅವಘಾತದಲ್ಲಿ ತಲೆಗೆ ತೀವ್ರವಾಗಿ ಗಾಯಗೊಂಡ ಹರ್ಷವರ್ಧನ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು ಐಪಿಎಸ್ ವೃತ್ತಿ ಜೀವನ ಆರಂಭಿಸಿದ ಮೊದಲ ದಿನವೇ ವಿಧಿಯಾಟಕ್ಕೆ ಬಲಿಯಾಗಿದ್ದಾರೆ.
ಹಾಸನದ ಕಿತ್ತಾನೆ ಬಳಿ ಸಂಜೆ 4.30ರ ವೇಳೆಗೆ ಜೀಪ್‌ನ ಟೈರ್ ಸ್ಫೋಟಗೊಂಡ ಪರಿಣಾಮ ಜೀಪ್ ಮೂರು ಸುತ್ತು ಉರುಳಿದೆ. ಪಲ್ಟಿಯಾದ ರಭಸಕ್ಕೆ ಜೀಪ್ ನಜ್ಜುಗುಜ್ಜಾಗಿದ್ದು ಅದರಲ್ಲಿ ಪ್ರಯಾಣಿಸುತ್ತಿದ್ದ ಹರ್ಷವರ್ಧನ್ ತಲೆಗೆ ಹಾಗೂ ದೇಹದ ಇನ್ನಿತರ ಭಾಗಕ್ಕೆ ತೀವ್ರವಾಗಿ ಪೆಟ್ಟುಬಿದ್ದು ತೀವ್ರ ರಕ್ತಸ್ರಾವ ಆಗಿದೆ. ಚಾಲಕ ಮಂಜೇಗೌಡ ಎಂಬುವರಿಗೂ ಗಾಯಗಳಾಗಿವೆ. ಸ್ಥಳೀಯರು ಕೂಡಲೇ ರಕ್ತಸ್ರಾವವಾಗಿ ಬಿದ್ದಿದ್ದ ಅಧಿಕಾರಿ ಮತ್ತು ಚಾಲಕನನ್ನು 108 ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿದ್ದರು.



















