ಸತ್ಯವನ್ನು ಅದುಮಿಡಲು ಯಾರಿಂದಲೂ ಸಾಧ್ಯವಿಲ್ಲ – ವಿ. ಸುನಿಲ್ ಕುಮಾರ್
ಸುಳ್ಳು ವಿಜೃಂಭಿಸುತ್ತಿದೆ ಸತ್ಯ ಮರೆಮಾಚುತ್ತಿದೆ, ಅಪಪ್ರಚಾರದಿಂದ ಕಾಮಗಾರಿ ಸ್ಥಗಿತಗೊಂಡಿದೆ – ಸುಮಿತ್ ಕೌಡೂರು

ಕಾರ್ಕಳವನ್ನು ಪ್ರೀತಿಸುವವರು ಅಭಿವೃದ್ದಿಯನ್ನು ಬೆಂಬಲಿಸುತ್ತಾರೆಬೈಲೂರು ಜನಾಗ್ರಹ ಸಭೆಯಲ್ಲಿ ಶಾಸಕ ವಿ.ಸುನಿಲ್ ಕುಮಾರ್ಕಾರ್ಕಳ : ಯಾರೂ ಕಾರ್ಕಳವನ್ನು ಪ್ರೀತಿಸುತ್ತಾರೆಯೋ? ಅವರು ಅಭಿವೃದ್ದಿಯನ್ನು ಪ್ರೀತಿಸುತ್ತಾರೆ. ಯಾರೂ ಅಭಿವೃದ್ದಿಯನ್ನು ದ್ವೇಷಿಸುತ್ತಿದ್ದಾರೆಯೋ ಅವರು ಕಾರ್ಕಳವನ್ನು ಪ್ರೀತಿಸಲು ಸಾಧ್ಯವಾಗಿಲ್ಲ ಎಂದು ಮಾಜಿ ಸಚಿವ ಹಾಗೂ ಶಾಸಕ ವಿ.ಸುನೀಲ್ ಕುಮಾರ್ ಹೇಳಿದ್ದಾರೆ.ಅವರು ಪರಶುರಾಮ ಥೀಂ ಪಾರ್ಕ್ ಕಾಮಗಾರಿ ಮುಂದುವರೆಸುವಂತೆ ಆಗ್ರಹಿಸಿ ಬೈಲೂರುನಲ್ಲಿ ಸೋಮವಾರ ನಡೆದ ಜನಾಗ್ರಹ ಸಭೆಯಲ್ಲಿ ಮಾತನಾಡಿದರು.
ಪರಶುರಾಮ ಥೀಂ-ಪಾರ್ಕ್ ಧಾರ್ಮಿಕಕೇಂದ್ರವಲ್ಲ, ಅದೊಂದು ಪ್ರವಾಸಿತಾಣ ಎಂದರು. ಒಂದು ವರ್ಷಗಳಿಂದ ಅಪಪ್ರಚಾರ ಎಲ್ಲೆ ಮೀರಿ ಮುಂದುವರೆದಿದೆ. ಅಂದು 2023ರ ಸೆ.4ರಂದು ಸುದ್ದಿಗೋಷ್ಠಿ ನಡೆಸಿ ನನ್ನ ಅಭಿಪ್ರಾಯವನ್ನು ಪ್ರಕಟಪಡಿಸಿದ್ದೇನೆ. ಇಂದು ಅದೇ ವಿಚಾರಕ್ಕೆ ಬದ್ದನಾಗಿದ್ದೇನೆ. ಈ ಹಿಂದಿನ ಸರಕಾರ ಬಿಡುಗಡೆಗೊಳಿಸಿದ 8.5 ಕೋಟಿ ಬಾಕಿ ಅನುದಾನವನ್ನು ಬಿಡುಗಡೆಗೊಳಿಸಬೇಕು. ಗುಣಮಟ್ಟದಲ್ಲಿ ವ್ಯತ್ಯಾಸವಾಗಿದ್ದರೆ ತನಿಖೆ ನಡೆಸಬೇಕು, ತನಿಖೆ ನೆಪದಲ್ಲಿ ಕಾಮಗಾರಿಗೆ ತಡೆ ಮಾಡಬಾರದು, ಅಪಪ್ರಚಾರ ನಿಲ್ಲಿಸಬೇಕು, ಆದಷ್ಟು ಬೇಗ ಸಾರ್ವಜನಿಕರಿಗೆ ಮುಕ್ತವಾಗಿಸಬೇಕು ಎಂದು ಇಂದು ಕೂಡಾ ಆಗ್ರಹಿಸುತ್ತೇನೆ ಎಂದರು.

ಸರಕಾರ ವಿನಃ ಕಾರಣ ಕಾಲಹರಣ ಮಾಡಿ ಪ್ರವಾಸೋದ್ಯಮವನ್ನು ನಾಶ ಮಾಡಲು ಹೊರಟಿದೆ. ನಾನು ಕಾರ್ಕಳ ಪ್ರೀತಿಸುತ್ತೇನೆ. ಆದ್ದರಿಂದ ಅಭಿವೃದ್ದಿಯನ್ನು ಬೆಂಬಲಿಸುತ್ತಿದ್ದೇನೆ. ಆದರೆ ಇಂದು ಅಭಿವೃದ್ದಿಯ ವಿರೋಧಿಗಳು ಈ ತರಹದ ಕೆಲಸಗಳನ್ನು ಮಾಡುತ್ತಿದ್ದಾರೆ. ಆರಂಭದಲ್ಲಿ ಇಡೀ ಮೂರ್ತಿಯೇ ಫೈಬರ್ ಎಂದರು. ಬಳಿಕ ಅರ್ಧ ಮೂರ್ತಿ ಫೈಬರ್ ಎಂದು ಆರೋಪಿಸಿದರು. ಪ್ರಸ್ತುತ ಶಿಲ್ಪಿ ಸರಿಯಿಲ್ಲ ಎನ್ನುತ್ತಿದ್ದಾರೆ. ಒಂದು ವೇಳೆ ಮೂರ್ತಿ ಫೈಬರ್‌ನದ್ದಾಗಿದ್ದರೆ, ಮಳೆ-ಬಿಸಿಲನ್ನು ತಡೆದು ನಿಲ್ಲುತ್ತಿತ್ತೇ ? ಎಂದು ಪ್ರಶ್ನಿಸಿದರು. ಕಳೆದ ಜನವರಿ ತಿಂಗಳಲ್ಲಿ ಸರಕಾರ ಸಿಓಡಿ ತನಿಖೆಗೆ ಆದೇಶಿಸಿತ್ತು. ಆದರೆ ಈವರೆಗೆ ಕ್ರಮಕೈಗೊಳ್ಳದ ಸಿಐಡಿ ತಂಡ, ತನಿಖೆಗಾಗಿ ಉಡುಪಿಗೆ ಈ ದಿನ ಆಗಮಿಸಿದೆ. ಮೂರ್ತಿಯ ಕಾಮಗಾರಿ ಪೂರ್ಣಗೊಳಿಸಲು ಹೈಕೋರ್ಟ್ ಆದೇಶವಿದ್ದರೂ, ಇನ್ಯಾವುದೋ ಕಾರಣವನ್ನು ಮುಂದಿಟ್ಟುಕೊಂಡು ಕೋರ್ಟ್ಗೆ ಜಿಲ್ಲಾಧಿಕಾರಿಗಳು ವಿವರಣೆ ನೀಡಲು ಮುಂದಾಗಿರುವ ಮಾಹಿತಿ ಬಂದಿದೆ. ಒಟ್ಟಾರೆ ಪ್ರವಾಸೋದ್ಯಮವನ್ನು ತಡೆಯುವ ನಿಟ್ಟಿನಲ್ಲಿ ಸರಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದರು.
ಸತ್ಯವನ್ನು ಅದುಮಿಡಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ದಿನದಿಂದ ದಿನಕ್ಕೆ ನಡೆಯುವ ಬೆಳವಣಿಗೆ ಏನು ?. ರಾಜ್ಯದಲ್ಲಿ ಓಡಾಟ ನಡೆಸುವ ವೇಳೆ ತುಂಬ ಜನ ನನ್ನಲ್ಲಿ ಪ್ರಶ್ನಿಸುತ್ತಿದ್ದಾರೆ. ಆದರೆ ಯಾರಿಗೂ ನಾನು ಯಾವ ವಿವರಣೆಯನ್ನೂ ನೀಡಿಲ್ಲ. ಅಂದು ಸೆ.3ರಂದು ನೀಡಿದ ವಿವರಣೆಯೇ ಆ ಪ್ರಶ್ನೆಗಳಿಗೆ ಉತ್ತರವಾಗಿದೆ ಎಂದರು.ಜನಾಗ್ರಹ ಸಭೆಯ ಸಂಚಾಲಕ ಸಚ್ಚಿತಾನಂದ ಶೆಟ್ಟಿ ಮಾತನಾಡಿ, ಇದು ಗೋಮಾಳ ಜಾಗ ಎನ್ನುವ ಅಡ್ಡಿ ಇದೀಗ ಎದುರಾಗಿದೆ. ಇಲ್ಲಿ ಕಳೆದ 40 ವರ್ಷ ಕ್ರಷರ್ ಇತ್ತು. ಆಗ ಯಾವುದೇ ಅಡ್ಡಿಯಾಗಲಿಲ್ಲ ಎಂದು ಪ್ರಶ್ನಿಸಿದರು. ರಾಜ್ಯ ಸರಕಾರ ಈ ಥೀಂ-ಪಾರ್ಕ್ ಕಾಮಗಾರಿಯನ್ನು ಮುಂದುವರೆಸಬೇಕು. ಇಲ್ಲವಾದಲ್ಲಿ ಇದಕ್ಕಿಂತ ಮಿಗಿಲಾದ ಹೋರಾಟ ನಾವು ನಡೆಸುತ್ತೇವೆ ಎಂದು ಎಚ್ಚರಿಸಿದರು.ಎರ್ಲಪ್ಪಾಡಿ ಗ್ರಾ.ಪಂ.ಅಧ್ಯಕ್ಷ ಸುನಿಲ್ ಹೆಗ್ಡೆ, ಓಂಕಾರ್ ನಾಯಕ್ ಮಾತನಾಡಿದರು.
ಜಿ.ಪಂ.ಮಾಜಿ ಸದಸ್ಯ ಸುಮಿತ್ ಶೆಟ್ಟಿ ಕೌಡೂರು ಮಾತನಾಡಿ, ಪ್ರಸ್ತುತ ಸುಳ್ಳು ವಿಜೃಂಭಿಸುತ್ತಿದೆ. ಸತ್ಯ ಮರೆಮಾಚುತ್ತಿದೆ. ಅಪಪ್ರಚಾರಗಳಿಂದಲ್ಲೇ ಕಾಮಗಾರಿ ಸ್ಥಗಿತಗೊಂಡಿದೆ. ನಾವೆಲ್ಲರೂ ಈ ವಿರುದ್ದ ಹೋರಾಟ ಮುಂದುವರೆಸಬೇಕು ಎಂದರು. ಪ್ರವಾಸೋದ್ಯಮ ದೃಷ್ಟಿಯಲ್ಲಿ ದೇಶದಲ್ಲೇ ಬೈಲೂರಿಗೆ ಹೆಮ್ಮೆಯ ಗರಿಯಾಗಿರುವ ಪರಶುರಾಮ ಥೀಂ-ಪಾರ್ಕ್ ಇನ್ನಷ್ಟು ಪ್ರಸಿದ್ದಿ ಪಡೆಯುವಲ್ಲಿ ಸಹಕರಿಸಬೇಕು ಎಂದರು. ವೇದಿಕೆಯಲ್ಲಿ ಮುಂಬೈ ಉದ್ಯಮಿ ಮಹೇಶ್ ಶೆಟ್ಟಿ, ಎರ್ಲಪ್ಪಾಡಿ ಗ್ರಾ.ಪಂ.ಅಧ್ಯಕ್ಷ ಸುನಿಲ್ ಹೆಗ್ಡೆ ಮತ್ತು ಓಂಕಾರ್ ನಾಯಕ್ ಮಾತನಾಡಿದರು.ವೇದಿಕೆಯಲ್ಲಿ ಪ್ರಸಾದ್ ಕಾಮತ್, ಪ್ರಶಾಂತ್ ಶೆಟ್ಟಿ ಗುತ್ತುಮನೆ ಜಾರ್ಕಳ, ಮಹೇಶ್ ಶೆಣೈ ಬೈಲೂರು, ವಿವಿಧ ಗ್ರಾ.ಪಂ.ಅದ್ಯಕ್ಷರುಗಳು ಉಪಸ್ಥಿತರಿದ್ದರು.ಉದಯ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.