31.4 C
Udupi
Wednesday, April 22, 2026
spot_img
spot_img
HomeBlog💢 ರಕ್ಷಾ ಬಂಧನ ರಕ್ಷೆಯ ದ್ಯೋತಕ

💢 ರಕ್ಷಾ ಬಂಧನ ರಕ್ಷೆಯ ದ್ಯೋತಕ

💢 ಜೀವನದುದ್ದಕ್ಕೂ ತನಗೆ ರಕ್ಷಣೆಯಾಗಿ ನಿಂತು ತನ್ನ ಸಾಧನೆಗೆ ಬೆನ್ನೆಲುಬಾಗಿ ನಿಲ್ಲುವ ಸಹೋದರ ಪ್ರೀತಿ ಅಮೂಲ್ಯವಾದದು

ಪ್ರಜ್ವಲಾ ಶೆಣೈ,ಕಾರ್ಕಳ

ರಕ್ಷಾ ಬಂಧನ ರಕ್ಷೆಯ ದ್ಯೋತಕ..
ರಕ್ಷಾ ಬಂಧನ ಇದು ಸಹೋದರ ಸಹೋದರಿಯರ ನಡುವಿನ ಒಲವಿನ ಬಂಧ.ಒಡಹುಟ್ಟಿದವರ ನಡುವೆ ಮೂಡುವ ಬಾಂಧವ್ಯದ ಅನುಬಂಧ.ನಿನ್ನ ರಕ್ಷಣೆಗೆ ಸದಾ ನಾನಿರುವೆ ಎಂದು ಭರವಸೆ ನೀಡುವ ಋಣಾನುಬಂಧ. ಸಹೋದರಿಯು ರಕ್ಷಣೆಯ ಸಂಕೇತವಾಗಿ ತನ್ನ ಸಹೋದರನಿಗೆ ರಾಖಿಯನ್ನು ಕಟ್ಟುವ ಸಂಪ್ರದಾಯ ಅನಾದಿ ಕಾಲದಿಂದಲೂ ನಡೆದು ಬಂದಿದೆ.ತನ್ನ ಸಹೋದರನ ಬಲಗೈ ಮಣಿಕಟ್ಟಿನ ಸುತ್ತ ಕಟ್ಟುವ ದಾರ ಕೇವಲ ಸಾಂಕೇತಿಕ ಎನಿಸಬಹುದು.ಆದರೆ ಅದರ ಹಿಂದಿನ ಉದ್ದೇಶ,ಆಶಯ,ಪ್ರೀತಿಗೆ ಬೆಲೆ ಕಟ್ಟಲಾಗದು.ಈ ದಿನ ಸಹೋದರನು ತನ್ನ ಸಹೋದರಿಯ ಮನೆಗೆ ಬರುವನು.ತನ್ನ ಸಹೋದರನ ಹಣೆಗೆ ತಿಲಕವಿಟ್ಟು,ಆರತಿ ಬೆಳಗಿ ಸಿಹಿ ತಿನ್ನಿಸಿ ರಕ್ಷೆಯನ್ನು ಕಟ್ಟುವುದು ಪದ್ಧತಿ.


ರಾಖಿಯಲ್ಲಿ ವೈವಿಧ್ಯತೆ..

ಬಣ್ಣ ಬಣ್ಣದ ರಾಖಿಗಳು ಈಗ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.ವಿವಿಧ ಮಣಿಗಳು,ಬಣ್ಣದ ದಾರಗಳಿಂದ ರೂಪುಗೊಂಡ ರಾಖಿಗಳು ಮನಸೆಳೆಯುತ್ತದೆ.
.ಇತ್ತೀಚೆಗೆ ಭಾವಚಿತ್ರ ಇರುವ ರಾಖಿಗಳು,ಚಿನ್ನ, ಬೆಳ್ಳಿ ,ವಜ್ರದ ರಾಖಿಗಳು ಕೂಡ ದೊರೆಯುತ್ತದೆ.ಇವೆಲ್ಲವೂ ನೋಡಲು ಕಣ್ಣಿಗೆ ಆಕರ್ಷಣೀಯವಾಗಿ ಕಂಡರೂ ಕೂಡ ರೇಷ್ಮೆಯ ದಾರದಿಂದ ಮಾಡಿದ ರಕ್ಷೆಗೆ ಮೊದಲ ಪ್ರಾಶಸ್ತ್ಯ.ಸಾಮಾನ್ಯವಾಗಿ ಯಾವ ಅಲಂಕಾರವೂ ಇಲ್ಲದ ಕೇಸರಿ ಬಣ್ಣದ ಹಲವು ರೇಷ್ಮೆಯ ದಾರಗಳನ್ನು ಸೇರಿಸಿ ಗಂಟು ಕಟ್ಟಿದ ರಾಖಿಯನ್ನು ಶ್ರೇಷ್ಠವೆಂದು ಭಾವಿಸಲಾಗುತ್ತದೆ.


ರಕ್ಷಾಬಂಧನ ಸಾಗಿ ಬಂದ ದಾರಿ..

ರಕ್ಷಾ ಬಂಧನ ಕೇವಲ ಸಹೋದರ ಸಹೋದರಿಯರ ಬಂಧಕ್ಕೆ ಮಾತ್ರ ಸೀಮಿತವಾಗಿಲ್ಲ.ಹಿಂದೆ ಯುದ್ಧಕ್ಕೆ ಹೋಗುವ ಪುರುಷರು ಯಾವುದೇ ತೊಂದರೆಗೆ ಒಳಗಾಗದೇ ವಿಜಯ ಶಾಲಿಗಳಾಗಿ ಬರಲಿ ಎಂದು ಹಾರೈಸಿ ರಕ್ಷಣೆಗಾಗಿ ದಾರವನ್ನು ಕಟ್ಟಿ ಕಳುಹಿಸುವ ಪದ್ಧತಿ ಆರಂಭವಾಯಿತು.ಹಿಂದಿನ ಕಾಲದಲ್ಲಿ ಅಕ್ಕಿ,ಚಿನ್ನ,ಬಿಳಿ ಸಾಸಿವೆ ಇತ್ಯಾದಿ ಒಗ್ಗೂಡಿಸಿ ರಕ್ಷೆ ತಯಾರಿಸಿ ಕಟ್ಟುತ್ತಿದ್ದರು.


ರಕ್ಷಾ ಬಂಧನ ಇದು ಪ್ರೀತಿಯ ಕೊಂಡಿ..

ರಕ್ಷಾ ಬಂಧನ ಇದು ರಕ್ಷಣೆಯ ಪ್ರತೀಕ.ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸುವ ಈ ಹಬ್ಬದ ಮೂಲ ಉದ್ದೇಶ ತನ್ನ ಸಹೋದರನ ಏಳಿಗೆ ಹಾಗೂ ಆತನಿಂದ ರಕ್ಷಣೆ ಪಡೆಯುವುದೇ ಆಗಿದೆ.ರಾಖಿ ಕಟ್ಟಿದ ಸಹೋದರಿಯ ಪ್ರೀತಿಗೆ ಬೆಲೆ ಕಟ್ಟಲಾಗದು,ಆದರೆ ಆಕೆ ಸದಾ ನೆನಪಿನಲ್ಲಿ ಇಟ್ಟುಕೊಳ್ಳುವಂತೆ ಒಲವಿನ ಉಡುಗೊರೆಯನ್ನು ಕೊಡುವ ಸಂಪ್ರದಾಯವಿದೆ.ಸಂಬಂಧಗಳ ನಡುವೆ ನಂಬಿಕೆ,ಪ್ರೀತಿ,ವಿಶ್ವಾಸ,ಬಾಂಧವ್ಯ ಬೆಸೆಯುವ ರಕ್ಷಾ ಸೂತ್ರವಾದ ರಕ್ಷಾ ಬಂಧನ ದೂರವಾಗುವ ಮನಸ್ಸುಗಳನ್ನು ಹತ್ತಿರವಾಗಿಸುವ ಪ್ರೀತಿಯ ಬೇಡಿ.ಸಹೋದರಿ ಕಟ್ಟುವುದು ಕೇವಲ ಒಂದು
ನೂಲಲ್ಲ.ಸಂಬಂಧಗಳನ್ನು ಸದಾ ಸುರಕ್ಷಿತವಾಗಿ ಬೆಸೆಯುವ ಕೊಂಡಿ.ಸಾಮರಸ್ಯ,ಸಹೋದರತ್ವದ ಪ್ರತೀಕವಾದ ಈ ಆಚರಣೆಯಿಂದ ಸದಾ ಮನೆಯಲ್ಲಿ ಸಂತೋಷ ,ಶಾಂತಿ,ಸಮೃದ್ಧಿ ನೆಲೆಸಲಿ ಎನ್ನುವ ಆಶಯವೂ ಇದೆ.

ಈ ಬಂಧನ ಭ್ರಾತೃತ್ವದ ಸಂಕೇತ
ಸಹೋದರ ಪ್ರೇಮ,ಭ್ರಾತೃತ್ವದ ಸಂಕೇತವಾಗಿರುವ ಈ ಆಚರಣೆಯು ಮನೆ ಮನಗಳಲ್ಲಿ ಉತ್ಸಾಹವನ್ನು ಚಿಮ್ಮಿಸುವುದು.ಇತ್ತೀಚಿನ ದಿನಗಳಲ್ಲಿ ತಮ್ಮ ಕೆಲಸದ ನಿಮಿತ್ತ ದೂರದ ಊರುಗಳಲ್ಲಿ ನೆಲೆಸಿರುವ ಸಹೋದರನಿಗೆ ನೇರವಾಗಿ ರಕ್ಷೆ ಕಟ್ಟಲು ಸಾಧ್ಯ ವಾಗದಿದ್ದರೂ ಅಂಚೆ ಮೂಲಕ ರಾಖಿಯನ್ನು ಕಳುಹಿಸಿ ತನ್ನ ಪ್ರೀತಿಯನ್ನು ತೋರ್ಪಡಿಸಲಾಗುತ್ತದೆ.ಜೀವನದುದ್ದಕ್ಕೂ ತನಗೆ ರಕ್ಷೆಯಾಗಿ ನಿಂತು,ತನ್ನ ಸಾಧನೆಗೆ ಬೆನ್ನೆಲುಬಾಗಿ ನಿಲ್ಲುವ ಸಹೋದರ ಪ್ರೀತಿ ಅಮೂಲ್ಯವಾದದ್ದು.

ರಕ್ಷಾಬಂಧನ ದೊಂದಿಗೆ ವೃಕ್ಷಾ ಬಂಧನ..
ಪ್ರಾಣಿ,ಪಕ್ಷಿ,ಸಕಲ ಜೀವರಾಶಿಗಳನ್ನು ತನ್ನ ಮಡಿಲಲ್ಲಿಟ್ಟು ಪೊರೆವ ಪ್ರಕೃತಿ ಎಂಬ ಭೂತಾಯಿ ತಾನು ಪಡೆದುಕೊಂಡದ್ದಕ್ಕಿಂತ ನಮಗೆ ಕೊಟ್ಟದ್ದೇ ಹೆಚ್ಚು.ನಮಗೆ ಆಶ್ರಯ,ಉಸಿರಾಡಲು ಶುದ್ಧ ವಾಯು,ಆಹಾರವಷ್ಟೆ ಅಲ್ಲ,ತನ್ನ ದೇಹದ ಭಾಗಗಳನ್ನು ಮನುಷ್ಯನ ಅಗತ್ಯತೆಗಳಿಗಾಗಿ ತ್ಯಾಗ ಮಾಡಿರುವ ವಾತ್ಸಲ್ಯಮಯಿ. ಆಕೆ ತನ್ನ ಮಡಿಲಲ್ಲಿರುವ ಎಲ್ಲರನ್ನೂ ಪೊರೆದು ಆಶ್ರಯವಿತ್ತು ಜೋಗುಳ ಹಾಡಿದ ಮಾತೃ ಹೃದಯಿ. ಉಸಿರನಿತ್ತ ಜೀವಜಾತೆ.ಹೂವು ಹಣ್ಣು,ಆಹಾರವಿತ್ತು ತನ್ನ ಮಡಿಲನ್ನು ಬರಿದಾಗಿಸಿದ ತ್ಯಾಗಮಯಿ. ಪ್ರತಿ ಬಾರಿ ಆಚರಿಸುವ ಸಹೋದರ ಸಹೋದರಿಯರ ಪವಿತ್ರ ಹಬ್ಬ ರಾಖಿ ಹಬ್ಬವನ್ನು ಈ ಬಾರಿ ವಿಶಿಷ್ಟವಾಗಿ ಆಚರಿಸುವ ಶಪಥ ಮಾಡೋಣ. ರಕ್ಷಾಬಂಧನದೊಂದಿಗೆ ವೃಕ್ಷಗಳನ್ನು ರಕ್ಷಿಸುವ ಹಾಗೂ ನಮ್ಮ ಸುತ್ತಮುತ್ತ ಹೆಚ್ಚು ಹೆಚ್ಚು ಗಿಡಮರಗಳನ್ನು ಬೆಳೆಸುವಂತಹ ವೃಕ್ಷಾಬಂಧನವನ್ನು ಆಚರಿಸೋಣ. ಪ್ರತಿಯೊಬ್ಬರೂ ಒಂದೊಂದು ವೃಕ್ಷಕ್ಕೆ ರಕ್ಷೆಯನ್ನು ಕಟ್ಟಿ ಅದನ್ನು ರಕ್ಷಿಸುವ ಹೊಣೆಗಾರಿಕೆ ಬೆಳೆಸಿಕೊಳ್ಳೋಣ. ಸಹೋದರ ಪ್ರೇಮ, ಕಾಳಜಿ,ಕೇವಲ ಮನುಷ್ಯನಿಗಷ್ಟೇ ಅಲ್ಲ. ನಮಗೆ ಉಸಿರು ಕೊಡುವ ಪರಿಸರಕ್ಕೂ ಮೀಸಲಾಗಿರಲಿ.ನಮ್ಮೆಲ್ಲರಿಗಾಗಿ ತನ್ನೆಲ್ಲವನ್ನು ಧಾರೆಯೆರೆಯುವ ವೃಕ್ಷಮಾತೆಯನ್ನು ಉಳಿಸೋಣ.ಆಗಲೇ ಪರಿಸರ ಸಂರಕ್ಷಣೆ ಸಾಧ್ಯ.ಅಲ್ಲವೇ ?..

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page