
ರಿಯಾದ್: ಸೌದಿ ಅರೇಬಿಯಾವು ಹಜ್ ಯಾತ್ರೆಯ ನೆಪದಲ್ಲಿ ಪಾಕಿಸ್ತಾನದಿಂದ ಬರುತ್ತಿರುವ ಭಿಕ್ಷುಕರ ಸಂಖ್ಯೆ ಕಂಡು ಹೌಹಾರಿದ್ದು ಧಾರ್ಮಿಕ ಯಾತ್ರೆಗೆ ನೀಡಲಾಗುವ ಉಮ್ರಾ ವೀಸಾದಡಿ ಸೌದಿ ಪ್ರವೇಶ ಮಾಡುತ್ತಿರುವ ಭಿಕ್ಷುಕರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ.
ಯಾತ್ರೆ ಆಯೋಜಿಸುವ ಏಜೆಂಟರನ್ನು ನಿರ್ಬಂಧಿಸಲು ಸಿದ್ಧತೆ ನಡೆಸಿದ್ದು ಪಾಕ್ ವಿದೇಶಾಂಗ ಇಲಾಖೆ ಪ್ರಕಾರ, ವಿದೇಶಗಳಲ್ಲಿರುವ ಭಿಕ್ಷುಕರಲ್ಲಿ 90% ಮಂದಿ ಪಾಕಿಸ್ತಾನದವರೇ ಆಗಿದ್ದಾರೆ. ಸೌದಿ ರಾಯಭಾರಿ ನವಾಫ್ ಬಿನ್ ಸೈದ್ ಅಹ್ಮದ್ ಅಲ್-ಮಲ್ಕಿ ಅವರನ್ನು ಭೇಟಿಯಾಗಿದ್ದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಅವರು ಸೌದಿ ಅರೇಬಿಯಾಕ್ಕೆ ಭಿಕ್ಷುಕರನ್ನು ಕಳುಹಿಸುವ ಮಾಫಿಯಾ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದ್ದರು.
ಜಿಯಾರತ್ (ತೀರ್ಥಯಾತ್ರೆ) ನೆಪದಲ್ಲಿ ಪಾಕಿಸ್ತಾನಿ ಭಿಕ್ಷುಕರು ಮಧ್ಯಪ್ರಾಚ್ಯಕ್ಕೆ ಪ್ರಯಾಣಿಸುತ್ತಾರೆ. ಹೆಚ್ಚಿನ ಜನರು ಉಮ್ರಾ ವೀಸಾದಲ್ಲಿ ಸೌದಿ ಅರೇಬಿಯಾಕ್ಕೆ ಭೇಟಿ ನೀಡುತ್ತಾರೆ ಮತ್ತು ನಂತರ ಭಿಕ್ಷಾಟನೆ-ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗುತ್ತಾರೆ ಎಂದು ಸಾಗರೋತ್ತರ ಪಾಕಿಸ್ತಾನಿಗಳ ಕಾರ್ಯದರ್ಶಿ ಜೀಶಾನ್ ಖಂಜಾದಾ ಕಳೆದ ವರ್ಷ ಹೇಳಿದ್ದರು.
ಇತ್ತೀಚೆಗೆ 11 ವ್ಯಕ್ತಿಗಳನ್ನು ಕರಾಚಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಸೌದಿಗೆ ಭಿಕ್ಷೆ ಬೇಡಲು ತೆರಳುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಸೌದಿ ವಿಮಾನದಿಂದಲೇ ಅವರನ್ನು ಹೊರ ಕಳುಹಿಸಲಾಗಿತ್ತು.













