
ಜೂನ್ 8ರಂದು, ಸ್ವಸ್ತಿಶ್ರೀ ನೇಮಿಸಾಗರ ವರ್ಣೀಜಿ ಪ್ರೌಢಶಾಲೆಯಲ್ಲಿ 2023-24 ನೇ ಸಾಲಿನ ಎಸ್.ಎಸ್.ಎಲ್. ಸಿ. ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಲಾ ಸಂಚಾಲಕರಾದ ಎಂ. ಕೆ. ವಿಜಯಕುಮಾರ್ ಅಡ್ವಕೇಟ್ ಮಾತನಾಡಿ ಈ ಸಂಸ್ಥೆ ಕಳೆದ ನಾಲ್ಕು ದಶಕಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಮೌಲ್ಯಧಾರಿತ ಶಿಕ್ಷಣ, ಸಂಸ್ಕಾರ ನೀಡಿ ಪಾಠ ಪಾಠೇತರ ಚಟುವಟಿಕೆಗಳ ಮೂಲಕ ಉತ್ತಮ ಸಾಧನೆಯನ್ನು ಮಾಡುತ್ತಿದೆ. ಉತ್ತಮ ಶಿಕ್ಷಣದಿಂದ ಮಾತ್ರ ಸಂಸ್ಕಾರಯುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದ ಅವರು ಶಿಕ್ಷಕರ ಸಮರ್ಥ ಮಾರ್ಗದರ್ಶನದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿಯ ವತಿಯಿಂದ ಅಭಿನಂದಿಸಿ ಶುಭ ಹಾರೈಸಿದರು.ಸ್ವಸ್ತಿ ಶ್ರೀ ನೇಮಿಸಾಗರ ವರ್ಣೀಜಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರದೀಪ್ ಎನ್. ವಿದ್ಯಾರ್ಥಿಗಳ ಸಾಧನೆಯನ್ನು ಪ್ರಶಂಸಿಸಿ ಶುಭ ಹಾರೈಸಿದರು.
ಮುಖ್ಯೋಪಾಧ್ಯಾಯಿನಿ ಶ್ರೀಮತಿ ಉಷಾ ಪಡಿವಾಳ್ ಹೆಚ್. ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಿರಿಯ ಶಿಕ್ಷಕ ಯೋಗರಾಜ್ ಜೈನ್ ವಿಶಿಷ್ಟ ಸಾಧನೆಗೈದ ವಿದ್ಯಾರ್ಥಿಗಳ ಮಾಹಿತಿ ನೀಡಿ ಅಭಿನಂದನಾ ಮಾತುಗಳನಾಡಿದರು. ಶಿಕ್ಷಕಿ ಶ್ರೀಮತಿ ಸಂಧ್ಯಾ ಕುಡ್ವ ವಂದಿಸಿದರು. ಶಿಕ್ಷಕಿ ಶ್ರೀಮತಿ ದಿವ್ಯಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.