
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲೆ ಸುತ್ತೂರಿನ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಶುಕ್ರವಾರ ಪಾಲ್ಗೊಂಡು ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ್ದು ಈ ವೇಳೆ ಮೈಕ್ರೋ ಫೈನಾನ್ಸ್ ವಸೂಲಿ ಕ್ರಮಕ್ಕೆ ಹೆದರಿ ಯಾರೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಸರ್ಕಾರ ಸದಾ ನಿಮ್ಮ ಜೊತೆಗಿದೆ. ತೊಂದರೆ ಕೊಟ್ಟರೆ ದೂರು ಕೊಡಿ. ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಬಡವರ ಆರ್ಥಿಕ ಅಸಹಾಯಕತೆಯನ್ನು ಶೋಷಿಸುವ ಮೈಕ್ರೋ ಫೈನಾನ್ಸ್ ಗಳ ಅತಿರೇಕದ ವಸೂಲಿ ನಿಯಂತ್ರಿಸಲು ಸುಗ್ರೀವಾಜ್ಞೆ ಮೂಲಕ ಕಠಿಣ ಕಾನೂನು ತರುತ್ತಿದ್ದೇವೆ. ಸುಗ್ರೀವಾಜ್ಞೆ ಹೊರಡಿಸಿದ ನಂತರ ಇದಕ್ಕೆ ಕಡಿವಾಣ ಬೀಳಲಿದೆ. ಜನ ಎಲ್ಲಿ ಸಾಲ ಸಿಗುತ್ತೋ ಅಲ್ಲಿಗೆ ಹೋಗುತ್ತಿದ್ದು ಇದನ್ನೇ ಬಂಡವಾಳ ಮಾಡಿಕೊಂಡು ಅವರು ಹೆಚ್ಚು ಬಡ್ಡಿ ಹಾಕುತ್ತಿದ್ದಾರೆ. ಔಟ್ ಸೋರ್ಸ್ ಮೂಲಕ ಗೂಂಡಾಗಳನ್ನು ಬಳಸಿಕೊಂಡು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.





















