
ಬೆಂಗಳೂರು: ಲೋಕಸಭಾ ಚುನಾವಣೆಯ ನಂತರ ಪಕ್ಷದಲ್ಲಿ ಬಣ ರಾಜಕಾರಣ ತೀವ್ರಗೊಂಡಿದ್ದು, ರಾಜ್ಯ ಕಾಂಗ್ರೆಸ್ ನಾಯಕರು ದಿಲ್ಲಿಯಲ್ಲಿ ವರಿಷ್ಠರನ್ನು ಭೇಟಿಯಾಗಿ ಬರುತ್ತಿದ್ದಂತೆ ಇದಕ್ಕೆ ತಡೆ ಹಾಕಲು ಮುಂದಾಗಿದ್ದು ಸಿಎಂ-ಡಿಸಿಎಂ ಕುರಿತು ಬೇಕಾಬಿಟ್ಟಿ ಹೇಳಿಕೆ ನೀಡುವವರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸುವುದಾಗಿ ಎಚ್ಚರಿಸಿದ್ದಾರೆ.
ಎರಡೂ ಬಣಗಳ ಮುಖಂಡರು ತಮ್ಮ ಎದುರಾಳಿಗಳ ವಿರುದ್ಧ ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿದ್ದಾರೆ. ಇದು ಪಕ್ಷಕ್ಕೆ ಮುಜುಗರ ಉಂಟುಮಾಡುವ ಹಂತಕ್ಕೆ ತಲುಪಿದ್ದು ಈ ಬೆಳವಣಿಗೆಗಳು ಹೈಕಮಾಂಡ್ ಗಮನವನ್ನೂ ಸೆಳೆಯುತ್ತಿವೆ. ಹೀಗಾಗಿ ಹೇಳಿಕೆ ನೀಡುವವರಿಗೆ ಮೂಗುದಾರ ಹಾಕಲು ತೀರ್ಮಾನಿಸಲಾಗಿದ್ದು ಪಕ್ಷದ ಆಂತರಿಕ ವಲಯದಲ್ಲಿ ಆಗಬೇಕಾದ ಚರ್ಚೆಗಳ ಬಗ್ಗೆ ಬಹಿರಂಗ ಹೇಳಿಕೆ ನೀಡಿದವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಿದ್ದೇನೆ ಎಂದು ತಿಳಿಸಿದರು.