
ನವದೆಹಲಿ: ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆಯನ್ನು ಸಮತೋಲನದಲ್ಲಿಡಲು ಕೇಂದ್ರ ಸರ್ಕಾರ ಹೊಸ ಆದೇಶ ಹೊರಡಿಸಿದೆ. ಕೈಗಾರಿಕಾ, ವಾಣಿಜ್ಯ ಹಾಗೂ ಸಾಂಸ್ಥಿಕ ಬಳಕೆದಾರರು ಇನ್ನು ಮುಂದೆ ಸಾಮಾನ್ಯ ಪೆಟ್ರೋಲ್ ಬಂಕ್‌ಗಳಿಂದ ದೊಡ್ಡ ಪ್ರಮಾಣದಲ್ಲಿ ಇಂಧನ ಖರೀದಿಸಲು ಅವಕಾಶ ಇರುವುದಿಲ್ಲ.
ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಜೂನ್ 11ರಂದು ಆದೇಶ ಹೊರಡಿಸಿದ್ದು, ತೈಲ ಕಂಪನಿಗಳಿಗೆ ಬಲ್ಕ್ ಖರೀದಿಗೆ ನಿಯಂತ್ರಣ ಹೇರಲು ಅಧಿಕಾರ ನೀಡಲಾಗಿದೆ.
ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ ಹಾಗೂ ಜಾಗತಿಕ ತೈಲ ಪೂರೈಕೆ ವ್ಯತ್ಯಯದ ಹಿನ್ನೆಲೆಯಲ್ಲಿ ಕೆಲವು ಕಡೆ ಡೀಸೆಲ್ ಬೇಡಿಕೆ ಹೆಚ್ಚಾಗಿದೆ. ಚಿಲ್ಲರೆ ಮತ್ತು ಬಲ್ಕ್ ಡೀಸೆಲ್ ದರದಲ್ಲಿ ದೊಡ್ಡ ವ್ಯತ್ಯಾಸ ಇರುವುದರಿಂದ ವಾಣಿಜ್ಯ ಬಳಕೆದಾರರು ಪೆಟ್ರೋಲ್ ಬಂಕ್‌ಗಳಿಂದ ಇಂಧನ ಪಡೆಯಲು ಮುಂದಾಗಿದ್ದರು.
ಹೊಸ ನಿಯಮದಂತೆ ಕೈಗಾರಿಕೆಗಳು ಮತ್ತು ಸಂಸ್ಥೆಗಳು ತಮ್ಮದೇ ಗ್ರಾಹಕ ಪಂಪ್‌ಗಳು ಅಥವಾ ಅಧಿಕೃತ ಬಲ್ಕ್ ಪೂರೈಕೆ ಕೇಂದ್ರಗಳಿಂದ ಮಾತ್ರ ಇಂಧನ ಪಡೆಯಬೇಕು. ವಾಹನ ಅಥವಾ ಗ್ರಾಹಕರಿಗೆ ದಿನಕ್ಕೆ ಗರಿಷ್ಠ 200 ಲೀಟರ್ ಡೀಸೆಲ್ ಖರೀದಿಗೆ ಮಿತಿ ವಿಧಿಸಲಾಗಿದೆ.
ಖರೀದಿಸಿದ ಇಂಧನವನ್ನು ಮರು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದ್ದು, ವಾಹನದ ಟ್ಯಾಂಕ್ ಅಥವಾ ಅನುಮೋದಿತ ಕಂಟೇನರ್‌ಗಳಲ್ಲಿ ಮಾತ್ರ ಸಾಗಿಸಲು ಅವಕಾಶ ನೀಡಲಾಗಿದೆ.
ಈ ನಿಯಮಗಳು ಮೊದಲ ಹಂತದಲ್ಲಿ 90 ದಿನಗಳ ಕಾಲ ಜಾರಿಯಲ್ಲಿರಲಿವೆ. ಅಗತ್ಯವಿದ್ದರೆ ಅವಧಿಯನ್ನು ವಿಸ್ತರಿಸುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಇಂಧನ ಸಂಗ್ರಹಣೆ, ಕಾಳಸಂತೆ ಹಾಗೂ ಅನಧಿಕೃತ ಮಾರಾಟ ತಡೆಯಲು ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಸಾಮಾನ್ಯ ಗ್ರಾಹಕರಿಗೆ ಇಂಧನ ಕೊರತೆ ಉಂಟಾಗದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ತಿಳಿಸಿದೆ.

































