
ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಪುಲ್ಕೇರಿ ಬೈಪಾಸ್ ನಿಂದ ಬಿಕರ್ನ ಕಟ್ಟೆಯ ವರೆಗೆ 45 km ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾರ್ಯ ಇದೀಗ ಭರದಿಂದ ಸಾಗುತ್ತಿದೆ.
ಸಾಣೂರು ಯುವಕ ಮಂಡಲದ ಎದುರಿನ ಮೈದಾನದಿಂದ ಗುಡ್ಡ ಕಡಿದು ರಸ್ತೆ ಮಾಡಿರುವ ಜಾಗದ ಅಂಚಿನಲ್ಲಿ ಹೈ ಟೆನ್ಶನ್ ವೈಯರ್ ಟವರ್ ಮತ್ತು ತಲಾ 50,000 ಲೀಟರ್ ಸಾಮರ್ಥ್ಯದ ಎರಡು ಓವರ್ ಹೆಡ್ ಟ್ಯಾಂಕುಗಳು ಗುಡ್ಡದ ಮಣ್ಣು ಜರಿದು ಧರಾಶಾಯಿಯಾಗುವ ಅಪಾಯವನ್ನು ಎದುರಿಸುತ್ತಿದ್ದವು.
ಈ ಬಗ್ಗೆ ಸಾಣೂರು ಯುವಕ ಮಂಡಲ , ಗ್ರಾಮಸ್ಥರು, ಪಂಚಾಯತ್ ಆಡಳಿತ ಮತ್ತು ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರು ಸಂಘಟಿತರಾಗಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಮೇಲೆ ಮಾನ್ಯ ಶಾಸಕರು, ಜಿಲ್ಲಾಧಿಕಾರಿಗಳು ,ಸಂಸದರು ಮತ್ತು ಪೊಲೀಸ್ ವರಿಷ್ಠಾಧಿಕಾರಿಯವರ ಮೂಲಕ ಒತ್ತಡ ಹೇರಿ ಕೊನೆಗೂ ಸುಮಾರು 110 ಮೀಟರ್ ಉದ್ದಕ್ಕೆ ತಡೆಗೋಡೆ ನಿರ್ಮಾಣಕ್ಕೆ ಹೆದ್ದಾರಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ ಕಳೆದ ಒಂದು ತಿಂಗಳಿನಿಂದ ತಡೆಗೋಡೆ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ.
ಪ್ರಸ್ತಾವನೆ 110 ಮೀಟರ್ ಅನುಮೋದನೆ 70 ಮೀಟರ್ ಮಾತ್ರ!?!?
ಜಿಲ್ಲಾಧಿಕಾರಿಗಳ ನೇತೃತ್ವದ ಜಿಲ್ಲಾಡಳಿತದ ತಂಡ ಸ್ಥಳ ವೀಕ್ಷಣೆ ಮಾಡುವಾಗ ಹೈ ಟೆನ್ಶನ್ ಟವರ್ ಅಂಚಿನಿಂದ ಯುವಕ ಮಂಡಲದ ಆಟದ ಮೈದಾನದ ಅಂಚಿನವರೆಗೆ ಸುಮಾರು 110 ಮೀಟರ್ ಉದ್ದಕ್ಕೆ ತಡೆಗೋಡೆ ನಿರ್ಮಾಣಕ್ಕೆ ಸೂಚನೆಯನ್ನು ನೀಡಿದ್ದರು.
ಇದೀಗ ಕೇವಲ 70 ಮೀಟರ್ ವರೆಗೆ ಮಾತ್ರ ತಡೆಗೋಡೆ ನಿರ್ಮಾಣ ಮಾಡಿರುವ ಗುತ್ತಿಗೆದಾರ ಕಂಪನಿಯವರು ತಡೆಗೋಡೆ ಇನ್ನೂ ಮುಂದಕ್ಕೆ ವಿಸ್ತರಣೆ ಮಾಡಬೇಕಾದರೆ ಪ್ರತ್ಯೇಕ ಪ್ರಸ್ತಾವನೆ ಸಲ್ಲಿಸಬೇಕು ಎಂದು ತಿಳಿಸಿರುತ್ತಾರೆ.
ತಡೆಗೋಡೆ ನಾಶ _ಬಾವಿಗೆ ಹಾನಿ!?!?
ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸಂದರ್ಭದಲ್ಲಿ 1992 ರಂದು ಸಾಣೂರು ಯುವಕ ಮಂಡಲದ ಮೈದಾನಕ್ಕೆ ದಾನಿಗಳ ಆರ್ಥಿಕ ನೆರವಿನಿಂದ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಕಟ್ಟಿದ ಸುಭದ್ರವಾದ ಶಿಲೆ ಕಲ್ಲಿನ ಆವರಣ ಗೋಡೆ ನಷ್ಟವಾಗಿದ್ದು, ಪಕ್ಕದಲ್ಲಿರುವ ಸರಕಾರಿ ಬಾವಿಗೂ ಹಾನಿಯಾಗಿತ್ತು.
ಇತ್ತೀಚೆಗೆ ಸಾಣೂರು ಗ್ರಾಮ ಪಂಚಾಯತ್ ವತಿಯಿಂದ ಸಾಣೂರು ಯುವಕ ಮಂಡಲದ ಮೈದಾನದ ಅಂಚಿನಲ್ಲಿದ್ದ ಸಾರ್ವಜನಿಕ ಸರಕಾರಿ ಬಾವಿಯನ್ನು 2.5 ಲಕ್ಷ ರೂಪಾಯಿ ವೆಚ್ಚದಲ್ಲಿ 15ನೇ ಹಣಕಾಸು ಯೋಜನೆ ಅಡಿಯಲ್ಲಿ ಬಾವಿಗೆ ರಿಂಗ್ ಅಳವಡಿಸಿ ಆವರಣ ಗೋಡೆಯನ್ನು ಪುನರ್ ನಿರ್ಮಾಣ ಮಾಡಿದ್ದರು.
ತಡೆಗೋಡೆ ನಿರ್ಮಾಣ ಮಾಡದಿದ್ದರೆ ನೂರಾರು ಜನ ಪ್ರತಿನಿತ್ಯ ಸಂಚರಿಸುವ ಮತ್ತು ಆಟವಾಡುವ ಮೈದಾನದ ಪ್ರದೇಶದ ಅಂಚಿನ ಮಣ್ಣು ಕುಸಿದು ನಡೆದಾಡುವವರಿಗೆ, ಆಟವಾಡುವವರಿಗೆ ಅಪಾಯವಾಗುವ ಸಂಭವವಿದೆ.
ಮೈದಾನದ ಹಂಚಿನಲ್ಲಿಯೇ ಪದ್ಮನಾಭನಗರಕ್ಕೆ ವಿದ್ಯುತ್ ಪೂರೈಕೆ ಮಾಡುವ ಟ್ರಾನ್ಸ್ಫಾರ್ಮರ್ ಮತ್ತು ಇತ್ತೀಚೆಗೆ ಪುನರ್ ನಿರ್ಮಾಣಗೊಂಡ ಸಾರ್ವಜನಿಕ ಸರಕಾರಿ ಬಾವಿ ಇದ್ದು ಅದಕ್ಕೂ ಹಾನಿಯಾಗುವ ಸಂಭವವಿದೆ.
ರಾಷ್ಟ್ರೀಯ ಹೆದ್ದಾರಿ ಇಲಾಖೆಯ ನಿರ್ಲಕ್ಷತನ ಮತ್ತು ಜನವಿರೋಧಿ ನೀತಿಯನ್ನು ವಿರೋಧಿಸಿ ಡಿಸೆಂಬರ್ 18 ಬುಧವಾರ ಸಂಜೆ 5:30 ಗಂಟೆಗೆ ನೂರಾರು ಸಂಖ್ಯೆಯಲ್ಲಿ ಸಾಣೂರು ಯುವಕ ಮಂಡಲದ ಪದಾಧಿಕಾರಿಗಳು ಸದಸ್ಯರು ಹಾಗೂ ಸ್ಥಳೀಯ ಪದ್ಮನಾಭನಗರದ ನಿವಾಸಿಗಳು ತಡೆಗೋಡೆ ನಿರ್ಮಾಣ ಕಾಮಗಾರಿಯ ಬಳಿ ಒಟ್ಟು ಸೇರಿ ತಡೆಗೋಡೆ ನಿರ್ಮಾಣ ಕಾರ್ಯವನ್ನು ವಿಸ್ತರಿಸಿ ಸಂಪೂರ್ಣಗೊಳಿಸುವಂತೆ ಘೋಷಣೆ ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರಾದ ಸಾಣೂರು ನರಸಿಂಹ ಕಾಮತ್ ರವರು ಸಂಸತ್ ಅಧಿವೇಶನದಲ್ಲಿ ಭಾಗವಹಿಸಲು ನವದೆಹಲಿಯಲ್ಲಿರುವ ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿಯವರನ್ನು ಫೋನ್ ಮೂಲಕ ಸಂಪರ್ಕಿಸಿ ಜನರಿಗಾಗುವ ತೊಂದರೆ ಮತ್ತು ಜನಾಕ್ರೋಶದ ಬಗ್ಗೆ ಮಾಹಿತಿ ನೀಡಿದರು.
ಮುಂದಿನ ವಾರ ತಡೆಗೋಡೆ ನಿರ್ಮಾಣವಾಗುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ನಿರ್ದೇಶನ ನೀಡುವುದಾಗಿ ಮಾನ್ಯ ಸಂಸದರು ತಿಳಿಸಿದರು.
ತಡೆಗೋಡೆ ವಿಸ್ತರಣೆಗೆ ಮನವಿ:
ಸಾಣೂರು ಯುವಕ ಮಂಡಲ ಮತ್ತು ಸ್ಥಳೀಯ ಪದ್ಮನಾಭನಗರದ ನಿವಾಸಿಗಳ ಪರವಾಗಿ ಮಾನ್ಯ ಶಾಸಕರಾದ ಸುನಿಲ್ ಕುಮಾರ್, ಸಂಸದರಾದ ಕೋಟಾ ಶ್ರೀನಿವಾಸ್ ಪೂಜಾರಿ ಜಿಲ್ಲಾಧಿಕಾರಿಗಳಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ಇನ್ನೂ 40 ಮೀಟರ್ ಮುಂದಿನವರೆಗೆ ವಿಸ್ತರಿಸುವಂತೆ ಮನವಿ ಸಲ್ಲಿಸುವುದೆಂದು ತೀರ್ಮಾನಿಸಲಾಯಿತು.
ತಡೆಗೋಡೆ ನಿರ್ಮಾಣ ಕಾರ್ಯ ಸಂಪೂರ್ಣ ಆಗುವವರೆಗೆ ಸಂಘಟಿತ ಹೋರಾಟ ನಡೆಸುವುದಾಗಿ ಸಾಣೂರು ಯುವಕ ಮಂಡಲದ ಅಧ್ಯಕ್ಷರಾದ ಪ್ರಸಾದ್ ಶೆಟ್ಟಿ, ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರಾದ ಸಾಣೂರು ನರಸಿಂಹ ಕಾಮತ್ ರವರು ಈ ಸಂದರ್ಭದಲ್ಲಿ ತಿಳಿಸಿದರು.
ಪ್ರತಿಭಟನಾ ಸಭೆಯಲ್ಲಿ ಸಾಣೂರು ಗ್ರಾಮ ಪಂಚಾಯತ್ ನ ಮಾಜಿ ಉಪಾಧ್ಯಕ್ಷರಾದ ಪ್ರಸಾದ್ ಪೂಜಾರಿ ,ಪಂಚಾಯತ್ ಸದಸ್ಯರಾದ ಪ್ರಕಾಶ್ ರಾವ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಕೃತಿ ವಿಕೋಪ ನಿರ್ವಹಣಾ ತಂಡದ ” ಶೌರ್ಯ” ಘಟಕದ ಅಧ್ಯಕ್ಷರಾದ ಮಾಧವ್ ಭಂಡಾರ್ಕರ್ , ಸೇವಾ ಪ್ರತಿನಿಧಿಗಳಾದ ಶ್ರೀಮತಿ ಅರುಣಿ, ಪುಷ್ಪಲತಾ ರಾವ್ , ಸಾಣೂರು ಯುವಕಮಂಡಲದ ಮಾಜಿ ಅಧ್ಯಕ್ಷರುಗಳಾದ ದೇವಾನಂದ ಶೆಟ್ಟಿ ಜಗದೀಶ್ ಶೆಟ್ಟಿಗಾರ್, ಶಂಕರ ಶೆಟ್ಟಿ ಮತ್ತು ಪದಾಧಿಕಾರಿಗಳಾದ ಮೋಹನ ಶೆಟ್ಟಿ , ಪ್ರಶಾಂತ್ ಶೆಟ್ಟಿ, ಮಂಡಲದ ಸದಸ್ಯರು ಹಾಗೂ ಪದ್ಮನಾಭನಗರದ ನಿವಾಸಿಗಳು ಭಾಗವಹಿಸಿದ್ದರು.