
ಬ್ಯಾಂಕ್ ಆಫ್ ಬರೋಡ ಸಾಣೂರು ಶಾಖೆಯಲ್ಲಿ ಎರಡೂವರೆ ವರ್ಷಗಳ ಕಾಲ ಜನಾನುರಾಗಿಯಾಗಿ ,ಗ್ರಾಹಕ ಸ್ನೇಹಿಯಾಗಿ ಅತ್ಯಪೂರ್ವ ಸೇವೆ ಸಲ್ಲಿಸಿ ಇದೀಗ ಗೋವಾಕ್ಕೆ ವರ್ಗಾವಣೆಗೊಂಡಿರುವ ಪ್ರಬಂಧಕರಾದ ಮುಂಡ್ಕೂರು ಪ್ರಮೋದ್ ಕಾಮತ್ ರವರಿಗೆ ಅವರ ಧರ್ಮಪತ್ನಿ ಮಂಗಳ ಕಾಮತ್ ರವರನ್ನು ಜೊತೆಗೂಡಿ ಸಾರ್ವಜನಿಕ ಅಭಿನಂದನೆ ಹಾಗೂ ಗೌರವಾರ್ಪಣೆಯ ಕಾರ್ಯಕ್ರಮ ಜೂನ್ 22 ಶನಿವಾರ ಸಂಜೆ ಸಾಣೂರು ಗ್ರಾಮ ಪಂಚಾಯತ್ ವಠಾರದ ಸುವರ್ಣ ಗ್ರಾಮೋದಯ ಸೌಧ ಸಭಾಭವನದಲ್ಲಿ ಜರುಗಿತು.
ಸಾಣೂರು ಗ್ರಾಮ ಪಂಚಾಯತ್, ಜಿಎಸ್‌ಬಿ ಸಭಾ ಶ್ರೀರಾಮ ಮಂದಿರ ಟ್ರಸ್ಟ್ (ರಿ.)ಸಾಣೂರು, ಯುವಕ ಮಂಡಲ(ರಿ.), ಸಾಣೂರು, ಶ್ರೀ ಬಾಲಾಂಜನೇಯ ಯುವಕ ಸಂಘ(ರಿ.), ಮುರತಂಗಡಿ ,ಶ್ರೀ ವಿಶ್ವಕರ್ಮ ಸಮಾಜಾಭ್ಯುದಯ ಸಂಘ, ಶಕ್ತಿ ಸಂಜೀವಿನಿ ಒಕ್ಕೂಟ ಮೊದಲಾದ ಸಂಘ-ಸಂಸ್ಥೆಗಳು, ಬ್ಯಾಂಕಿನ ಗ್ರಾಹಕರು ,ಸಿಬ್ಬಂದಿ ವರ್ಗ ಮತ್ತು ಅಭಿಮಾನಿ ಬಳಗದ ಪರವಾಗಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಎರಡೂವರೆ ವರ್ಷಗಳ ಅಲ್ಪಾವಧಿಯಲ್ಲಿ ಗ್ರಾಹಕ ಸ್ನೇಹಿಯಾಗಿ ನಗುಮೊಗದ ಸೇವೆಯ ಜೊತೆಗೆ ಕಾರ್ಯದಕ್ಷತೆ, ಬ್ಯಾಂಕಿಂಗ್ ಸೇವಾ ಸೌಲಭ್ಯವನ್ನು ಗ್ರಾಮದ ಕಟ್ಟಕಡೆಯ ವ್ಯಕ್ತಿಗೆ ಮುಟ್ಟಿಸುವಲ್ಲಿ ಯಶಸ್ವಿಯಾದ ಬ್ಯಾಂಕಿನ ಪ್ರಬಂಧಕರಾದ ಮುಂಡ್ಕೂರು ಪ್ರಮೋದ್ ಕಾಮತ್ ರವರ ನೆನಪು ಗ್ರಾಹಕರ ಮನಸ್ಸಿನಲ್ಲಿ ಸದಾ ಚಿರಸ್ಥಾಯಿಯಾಗಿ ಉಳಿಯುತ್ತದೆ ಎಂದು ಅಭಿನಂದಿಸಿ ಮಾತನಾಡಿದ ಸಾಣೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಹಾಗೂ ಕೆಎಂಎಫ್ ನಿರ್ದೇಶಕರಾದ ಸಾಣೂರು ನರಸಿಂಹ ಕಾಮತ್ ರವರು ಅವರ ಮುಂದಿನ ಬ್ಯಾಂಕಿಂಗ್ ಪಯಣ ವರ್ಗಾವಣೆಗೊಂಡಿರುವ ಗೋವಾದಲ್ಲಿಯೂ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ನೂತನ ಬ್ಯಾಂಕ್ ಪ್ರಬಂಧಕರಾಗಿ ಅಧಿಕಾರ ಸ್ವೀಕರಿಸಿದ ಮೂಡಿಗೆರೆಯ ಅವಿನಾಶ್ ರವರನ್ನು ಆತ್ಮೀಯವಾಗಿ ಬರಮಾಡಿಕೊಂಡು ಸ್ವಾಗತಿಸಲಾಯಿತು.ಸಾಣೂರಿನ ಜನಪ್ರಿಯ ವೈದ್ಯರಾದ ಡಾ. ಅಜಿತ್ ಪ್ರಕಾಶ್, ನಿಕಟಪೂರ್ವ ಜಿಪಂ ಸದಸ್ಯರಾದ ಇರುವತ್ತೂರಿನ ಉದಯ .ಎಸ್. ಕೋಟ್ಯಾನ್, ಜಯಕೀರ್ತಿ ಕಡಂಬ ಇರುವತ್ತೂರು, ಸಾಣೂರು ಗ್ರಾಪಂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎಮ್ ಸಿ ಮಧು, ಸಾಣೂರು ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ವೃಂದ, ಯುವಕ ಮಂಡಲ (ರಿ.),ಸಾಣೂರು ಇದರ ಅಧ್ಯಕ್ಷರಾದ ಪ್ರಸಾದ್ ಶೆಟ್ಟಿ, ಶಕ್ತಿ ಸಂಜೀವಿನಿ ಒಕ್ಕೂಟದ ಜಯಲಕ್ಷ್ಮಿ ಶೆಟ್ಟಿಗಾರ್ ಅಭಿನಂದಿಸಿ ಮಾತನಾಡಿದರು.
ಸನ್ಮಾನಿತರಾದ ಶ್ರೀ ಮುಂಡ್ಕೂರು ಪ್ರಮೋದ್ ಕಾಮತ್ ರವರು ಸಾಣೂರು ಮತ್ತು ಇರುವತ್ತೂರು ಗ್ರಾಮಸ್ಥರ ಹಾಗೂ ಬ್ಯಾಂಕಿನ ಎಲ್ಲಾ ಗ್ರಾಹಕರು ,ಸಿಬ್ಬಂದಿ ವರ್ಗ, ಗ್ರಾಮದ ಎಲ್ಲಾ ವಿದ್ಯಾಸಂಸ್ಥೆಗಳು ಹಾಗೂ ಸಂಘ ಸಂಸ್ಥೆಗಳ ಸಹಕಾರವನ್ನು ಸ್ಮರಿಸಿ, ಎಲ್ಲರ ಪ್ರೀತಿ ವಿಶ್ವಾಸವನ್ನು ಗಳಿಸಿರುವುದು ನನ್ನ ಜೀವನದ ಸಾರ್ಥಕ ಕ್ಷಣ ಎಂದು ಭಾವಪೂರ್ಣವಾಗಿ ಮಾತನಾಡಿದರು.
ಸಾಣೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಯುವರಾಜ್ ಜೈನ್ ರವರ ಅಧ್ಯಕ್ಷತೆಯಲ್ಲಿ ಜರುಗಿದ ಸಾರ್ವಜನಿಕ ಅಭಿನಂದನ ಸಮಾರಂಭದ ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಯಶೋಧ .ವಿ. ಶೆಟ್ಟಿ, ಶ್ರೀ ಆನಂದ ಶೆಟ್ಟಿ, ಶ್ರೀ ಚಂದ್ರರಾಜ ಅತಿಕಾರಿ, ಸಾಣೂರು ಗುತ್ತು ಪ್ರಭಾತ್ ನಾಯ್ಕ್ ಉಪಸ್ಥಿತರಿದ್ದರು. ಸಚ್ಚರಿಪೇಟೆ ಸುಧೀರ್ ನಾಯಕರವರು ಸನ್ಮಾನ ಪತ್ರವನ್ನು ಓದಿ ಕಾರ್ಯಕ್ರಮವನ್ನು ನಿರೂಪಿಸಿದರು. ಗ್ರಾಮ ಪಂಚಾಯತ್ ಸದಸ್ಯರಾದ ಪ್ರಸಾದ್ ಪೂಜಾರಿಯವರು ಸ್ವಾಗತಿಸಿ, ಸಾಣೂರು ಯುವಕ ಮಂಡಲದ ಕಾರ್ಯದರ್ಶಿ ಮೋಹನ್ ಶೆಟ್ಟಿಯವರು ವಂದನಾರ್ಪಣೆಗೈದರು.