
ಮಂಗಳೂರು: ಮಂಗಳವಾರ ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ-66ರ ಕೆಪಿಟಿ ಜಂಕ್ಷನ್ ಬಳಿ ಉಂಟಾದ ಹೊಂಡಗಳನ್ನು ಸಂಚಾರಿ ಪೊಲೀಸರು ಕರ್ತವ್ಯದಲ್ಲಿರುವಾಗಲೇ ಹಾರೆ ಹಿಡಿದು ಕಾಂಕ್ರೀಟ್ ಹಾಕಿ ಮುಚ್ಚುವ ಕೆಲಸ ಮಾಡಿದ್ದಾರೆ.
ಸಂಚಾರ ಪೂರ್ವ (ಕದ್ರಿ) ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಈಶ್ವರ್ ಸ್ವಾಮಿ, ಸಿಬಂದಿ ಸಿದ್ದರಾಜು ಮತ್ತು ಮಂಜು ಅವರು ಈ ಕೆಲಸ ಮಾಡಿದ್ದು ಈ ಬಗ್ಗೆ ಪ್ರತಿಕ್ರಿಯಿಸಿರುವ ಈಶ್ವರ್ ಸ್ವಾಮಿಯವರು, ಇತ್ತೀಚೆಗೆ ಇಲ್ಲಿನ ರಸ್ತೆ ಹೊಂಡಕ್ಕೆ ಬಿದ್ದು ಸ್ಕೂಟರ್ ಸವಾರರಾದ ಹಿರಿಯ ನಾಗರಿಕರೋರ್ವರು ಗಾಯಗೊಂಡಿದ್ದರು. ಅದನ್ನು ನೋಡಿದ ಮರುದಿನವೇ ಕಾಂಕ್ರೀಟ್ ತರಿಸಿ ಹಾಕಿದ್ದೆ. ಆದರೆ ಮಳೆ ಹೆಚ್ಚಿದ್ದರಿಂದ ಅದು ಸ್ವಲ್ಪ ಮಾತ್ರವೇ ಉಳಿದಿತ್ತು. ಮಂಗಳವಾರ ಮತ್ತೂಮ್ಮೆ ಕಾಂಕ್ರೀಟ್ ತರಿಸಿ ಹಾಕಿಸಿದ್ದೇವೆ. ಮಳೆ ಕಡಿಮೆಯಾಗಿದ್ದರಿಂದ ಅನುಕೂಲವಾಗಿದೆ ಎಂದು ಹೇಳಿದ್ದಾರೆ.
ಸಾರ್ವಜನಿಕ ವಲಯದಿಂದ ಸಂಚಾರಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದು ಕೂಡ ಸಾರ್ವಜನಿಕರು ಒತ್ತಡ ಹೇರಿದ್ದಾರೆ.