28.3 C
Udupi
Thursday, April 23, 2026
spot_img
spot_img
HomeBlogಶ್ರೀ ಸರ್ವಪಲ್ಲಿ ರಾಧಾಕೃಷ್ಣನ್ ಅವರು ತಮ್ಮ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸುವಂತೆ ಕರೆಕೊಟ್ಟಿದ್ದು ಅರ್ಥಪೂರ್ಣ: ಸಿಎಂ...

ಶ್ರೀ ಸರ್ವಪಲ್ಲಿ ರಾಧಾಕೃಷ್ಣನ್ ಅವರು ತಮ್ಮ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸುವಂತೆ ಕರೆಕೊಟ್ಟಿದ್ದು ಅರ್ಥಪೂರ್ಣ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಶ್ರೀ ಸರ್ವಪಲ್ಲಿ ರಾಧಾಕೃಷ್ಣನ್ ಅವರು ನಮ್ಮ ಭಾರತದ ಎರಡನೇ ರಾಷ್ಟ್ರಪತಿಗಳು ಮತ್ತು ಸ್ವತಃ ಶಿಕ್ಷಕರೂ ಆಗಿದ್ದು ಅವರು ತಮ್ಮ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸುವಂತೆ ಕರೆಕೊಟ್ಟಿದ್ದು ಅರ್ಥಪೂರ್ಣ ಎನ್ನಬಹುದು.

ಮೈಸೂರಿನಿಂದ ಹದಿಮೂರು ಮೈಲಿ ದೂರದ ಸಿದ್ದರಾಮನ ಹುಂಡಿ ಎಂಬ ಪುಟ್ಟಹಳ್ಳಿಯಲ್ಲಿ ನಾನು ಹುಟ್ಟಿದಾಗ, ಮುಂದೊಂದು ದಿನ ಈ ನಾಡಿನ ಮುಖ್ಯಮಂತ್ರಿ ಆಗಬಹುದೆಂದು ನನ್ನ ಹೆತ್ತವರೂ ಊಹಿಸಿರಲಿಲ್ಲ. ಸ್ವತಃ ನನಗೇ ಆ ಕನಸುಗಳಿರಲಿಲ್ಲ. ಆದರೆ ಅದನ್ನು ಸಾಧ್ಯವಾಗಿಸಿದ್ದು ಶಿಕ್ಷಣ. ಶಿಕ್ಷಣಕ್ಕೆ ಅಂತಹ ಪರಿವರ್ತನೆಯ ಶಕ್ತಿಯಿದೆ. ಅದಕ್ಕಾಗಿಯೇ ಬಾಬಾ ಸಾಹೇಬ್ ಅಂಬೇಡ್ಕರರು ಬಹಳ ಹಿಂದೆಯೇ ಸಂಘಟಿತರಾಗಿ, ಶಿಕ್ಷಿತರಾಗಿ, ಜಾಗೃತರಾಗಿ ಎಂದು ಕರೆ ಕೊಟ್ಟಿದ್ದಾರೆ.

ನಾನು ಬಡ ಕುಟುಂಬದಲ್ಲಿ ಹುಟ್ಟಿದ್ದು ಕೃಷಿಯೇ ನಮಗೆ ಜೀವನಾಧಾರ. ನನ್ನ ಅಪ್ಪ-ಅಮ್ಮನಿಗೆ ಶಿಕ್ಷಣದ ಬಗ್ಗೆ ಅಷ್ಟಾಗಿ ಅರಿವಿರಲಿಲ್ಲ. ಹಾಗಾಗಿ ನನ್ನನ್ನು ಶಾಲೆಗೆ ಸೇರಿಸಲಿಲ್ಲ. ಸ್ನೇಹಿತರ ಜೊತೆ ಆಟ ಆಡಿಕೊಂಡು, ಗದ್ದೆ ಬದುಗಳಲ್ಲಿ ಎಮ್ಮೆ ಮೇಯಿಸಿಕೊಂಡು ಚೆಲ್ಲಾಪಿಲ್ಲಿಯಾಗಿ ನನ್ನ ಬಾಲ್ಯ ಶುರುವಾಯಿತು.

ನಮ್ಮೂರ ಕಡೆ ವೀರಮಕ್ಕಳ ಕುಣಿತ ಎಂಬ ಜನಪದ ಶೈಲಿಯ ನೃತ್ಯವಿದೆ. ಸಾಮಾನ್ಯವಾಗಿ ಮಕ್ಕಳಿಗೆ ಅದನ್ನು ಕಲಿಸಲಾಗುತ್ತದೆ. ಅದನ್ನು ಕಲಿಸುವುದಕ್ಕೆಂದೇ ನಂಜೇಗೌಡರು ಎಂಬ ಮೇಷ್ಟ್ರಿದ್ದರು. ನನ್ನನ್ನು ಅವರ ಬಳಿ ಕುಣಿತ ಕಲಿಯಲು ಕಳಿಸಿದರು. ಕುಣಿತದ ಜೊತೆಗೆ ಅವರು ಮರಳಿನ ಮೇಲೆ ನಮಗೆ ಅಕ್ಷರಾಭ್ಯಾಸ ಕಲಿಸುತ್ತಿದ್ದರು. ನಾನು ಸ್ವಲ್ಪ ಚುರುಕು. ಅಕ್ಷರಗಳನ್ನು ಬೇಗ ಕಲಿತು ಬರೆಯುತ್ತಿದ್ದೆ. ಇದನ್ನು ನಮ್ಮೂರಿನ ಶಾಲೆಯ ರಾಜಪ್ಪ ಮೇಷ್ಟ್ರು ಎನ್ನುವವರು ಗಮನಿಸಿದರು. ನನ್ನಲ್ಲಿರುವ ಶಿಕ್ಷಣ ಆಸಕ್ತಿಯನ್ನು ಅವರು ಪತ್ತೆ ಹಚ್ಚಿದರು. ನಮ್ಮ ತಂದೆಯ ಬಳಿ ಮಾತಾಡಿ, ಅವರ ಮನವೊಲಿಸಿ, ನನ್ನನ್ನು ನೇರವಾಗಿ ಐದನೇ ತರಗತಿಗೆ ಸೇರಿಸಿಕೊಂಡರು. ಹಾಗೆ ಶುರುವಾದ ನನ್ನ ಶಿಕ್ಷಣದ ಹಾದಿ ಇಲ್ಲಿಯವರೆಗೆ ತಂದು ನಿಲ್ಲಿಸಿದೆ.

ಒಂದು ವೇಳೆ ರಾಜಪ್ಪ ಮೇಷ್ಟ್ರು ನನ್ನ ಬದುಕಿನಲ್ಲಿ ಪ್ರವೇಶಿಸಿ, ನನ್ನನ್ನು ಶಾಲೆಗೆ ಸೇರಿಸುವ ಪ್ರಯತ್ನ ಮಾಡದೇ ಇದ್ದಿದ್ದರೆ ನನ್ನ ಕನಸುಗಳು ಸಿದ್ದರಾಮನ ಹುಂಡಿಯಿಂದ ಆಚೆಗೆ ಹಿಗ್ಗುತ್ತಿದ್ದವೋ ಇಲ್ಲವೋ ಗೊತ್ತಿಲ್ಲ. ಹಾಗಾಗಿ ಸರಿಯಾದ ಸಮಯದಲ್ಲಿ, ಸೂಕ್ತ ಶಿಕ್ಷಕರ ಪ್ರವೇಶದಿಂದ ನಮ್ಮ ಬದುಕಿಗೆ ನಿರ್ದಿಷ್ಟ ದಾರಿ ಮತ್ತು ಸ್ಪಷ್ಟ ಗುರಿಗಳು ಲಭಿಸುತ್ತವೆ. ನನ್ನಂತಹ ಅದೆಷ್ಟೋ ಸಾವಿರ ಸಹಸ್ರ ಮಕ್ಕಳ ಭವಿಷ್ಯ ರೂಪಿಸುವಲ್ಲಿ ತಮ್ಮ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ಇವತ್ತಿನ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ವಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.

ಎಲ್ಲಾ ಸವಾಲುಗಳನ್ನು ಮೀರಿ ನಿಲ್ಲುವ ಸಾಮರ್ಥ್ಯ ನಮ್ಮ ಶಿಕ್ಷಕ ವರ್ಗಕ್ಕಿದೆ. ಅದಕ್ಕೆ ಬೇಕಾದ ಪೂರಕ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ನಮ್ಮ ಸರ್ಕಾರ ಸದಾ ಸಿದ್ಧವಿರಲಿದೆ. ನನಗೆ ಸಿಕ್ಕ ರಾಜಪ್ಪ ಮೇಷ್ಟ್ರಂತಹ ಶಿಕ್ಷಕರು ಪ್ರತಿಯೊಬ್ಬ ವಿದ್ಯಾರ್ಥಿಗೆ ಸಿಗುವಂತಾಗಲಿ ಎಂಬುದು ನನ್ನ ಆಶಯ ಎಂದು ಸಿಎಂ ಸಿದ್ದರಾಮಯ್ಯ ಶಿಕ್ಷಕರ ದಿನಾಚರಣೆಯ ಶುಭಾಶಯ ಕೋರಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page