ನಾಯಕತ್ವ ಎಂದರೆ ಸೇವಾ ಮನೋಭಾವ, ಜವಾಬ್ದಾರಿ ಉತ್ತಮ ನಿರ್ಧಾರ: ರವಿಶಂಕರ್, ವಕೀಲರು

ನಾಯಕತ್ವವೆಂದರೆ ಕೇವಲ ಅಧಿಕಾರವನ್ನು ಹೊಂದುವುದಲ್ಲ, ಬದಲಾಗಿ ಸೇವಾ ಮನೋಭಾವ, ಜವಾಬ್ದಾರಿ ಹಾಗೂ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವುದಾಗಿದೆ. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತು, ಪ್ರಾಮಾಣಿಕತೆ ಹಾಗೂ ಸಾಮಾಜಿಕ ಕಳಕಳಿಯನ್ನು ಬೆಳೆಸಿಕೊಂಡಾಗ ಮಾತ್ರ ಉತ್ತಮ ನಾಯಕರಾಗಲು ಸಾಧ್ಯ ಎಂದು ಕಾರ್ಕಳದ ಖ್ಯಾತ ವಕೀಲರಾದ ರವಿಶಂಕರ್ ಅವರು ಹೇಳಿದರು.
ಇವರು ದಿನಾಂಕ 15-07-2026 ರಂದು, ಎಂ ಆರ್ ಪೈ ಫೌಂಡೇಶನ್ ಮುಂಬೈ ಇದರ ಪ್ರಾಯೋಜಕತ್ವದಲ್ಲಿ ಶ್ರೀ ಭುವನೇಂದ್ರ ರೆಸಿಡೆನ್ಶಿಯಲ್ ಸ್ಕೂಲ್ ಕಾರ್ಕಳ, ಇಲ್ಲಿನ 9ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ನಡೆದ ಎರಡು ದಿನಗಳ ನಾಯಕತ್ವ ತರಬೇತಿ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಸಂಚಾಲಕರಾದ ಕೆ ವೆಂಕಟೇಶ್ ಪ್ರಭು ಇವರು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದ ಪ್ರತಿಯೊಂದು ಹಂತದಲ್ಲಿಯೂ ನಾಯಕತ್ವದ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಶಿಕ್ಷಣದ ಜೊತೆಗೆ ಉತ್ತಮ ವ್ಯಕ್ತಿತ್ವ ಮತ್ತು ಜವಾಬ್ದಾರಿಯುತ ನಾಯಕತ್ವವು ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲಗೊಳಿಸುತ್ತದೆ ಎಂದು ಅವರು ಹೇಳಿದರು.
ಶಿಬಿರದ ತರಬೇತಿಯನ್ನು ಶ್ರೀ ರಾಜೀವ್ ಕುಮಾರ್ ಲುವ್ ಹಾಗೂ ಶ್ರೀ ಗೌರವ್ ಮಲ್ಲೋತ್ರಾ ಅವರು ಅತ್ಯಂತ ಪರಿಣಾಮಕಾರಿಯಾಗಿ ನಡೆಸಿಕೊಟ್ಟರು. ಅವರು ವಿವಿಧ ಚಟುವಟಿಕೆಗಳು, ಗುಂಪು ಚರ್ಚೆಗಳು, ನಾಯಕತ್ವದ ಆಟಗಳು ಹಾಗೂ ಪ್ರೇರಣಾದಾಯಕ ಅಧಿವೇಶನಗಳ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಬೆಳೆಸಿದರು. ಉತ್ತಮ ನಾಯಕನ ಗುಣಲಕ್ಷಣಗಳು, ಪರಿಣಾಮಕಾರಿ ಸಂವಹನ, ತಂಡದೊಂದಿಗೆ ಕಾರ್ಯನಿರ್ವಹಿಸುವ ಕೌಶಲ್ಯ, ಸಮಸ್ಯೆಗಳನ್ನು ಪರಿಹರಿಸುವ ವಿಧಾನ ಹಾಗೂ ಗುರಿ ಸಾಧನೆಗೆ ಅಗತ್ಯವಾದ ಮನೋಭಾವಗಳ ಕುರಿತು ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದ ಕೊನೆಯಲ್ಲಿ ಎರಡು ದಿನಗಳ ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಪ್ರಾಂಶುಪಾಲರಾದ ಶ್ರೀಮತಿ ಬಿ. ವೀಣಾ ಶೆಣೈ ಸ್ವಾಗತಿಸಿದರು.ವಿದ್ಯಾರ್ಥಿನಿಯಾದ ಸೃಷ್ಟಿ ಕಾರ್ಯಕ್ರಮವನ್ನು ನಿರೂಪಿಸಿದರೆ.ಮಾಸ್ಟರ್ ತೇಜಸ್ ಧನ್ಯವಾದವಿತ್ತರು.ಈ ಕಾರ್ಯಕ್ರಮದಲ್ಲಿ ಶಿಕ್ಷಕರು, ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
















































