ವಿಚ್ಛೇದನಕ್ಕೆ ಕೋರ್ಟ್ ಮೆಟ್ಟಿಲೇರಿದ ದಂಪತಿ

ಬೆಂಗಳೂರು: ಕನ್ನಡ ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ಶುಭಾ ಪೂಂಜಾ ಮತ್ತು ಅವರ ಪತಿ ಸುಮಂತ್ ಬಿಲ್ಲವ ವೈವಾಹಿಕ ಜೀವನಕ್ಕೆ ತೆರೆ ಬೀಳುವ ಸಾಧ್ಯತೆ ಕಂಡುಬಂದಿದೆ. ಇಬ್ಬರೂ ಪರಸ್ಪರ ಒಪ್ಪಿಗೆಯೊಂದಿಗೆ ವಿಚ್ಛೇದನ ಕೋರಿ ಫ್ಯಾಮಿಲಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
‘ಮೊಗ್ಗಿನ ಮನಸು’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದ ಶುಭಾ ಪೂಂಜಾ, ಉದ್ಯಮಿ ಸುಮಂತ್ ಬಿಲ್ಲವ ಅವರನ್ನು ಪ್ರೀತಿಸಿ 2022ರ ಜನವರಿಯಲ್ಲಿ ವಿವಾಹವಾಗಿದ್ದರು. ಮದುವೆಯಾದ ನಾಲ್ಕು ವರ್ಷಗಳಲ್ಲೇ ವಿಚ್ಛೇದನದ ನಿರ್ಧಾರ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.
ಜಂಟಿ ಅರ್ಜಿ ಸಲ್ಲಿಸಿರುವ ದಂಪತಿ ಮುಂದಿನ ವಿಚಾರಣೆಯಲ್ಲಿ ನ್ಯಾಯಾಲಯಕ್ಕೆ ಹಾಜರಾಗುವ ಸಾಧ್ಯತೆ ಇದೆ. ಆದರೆ ವಿಚ್ಛೇದನದ ಕಾರಣವನ್ನು ಸುಮಂತ್ ಬಹಿರಂಗಪಡಿಸಿಲ್ಲ. ಇದೇ ವೇಳೆ ಶುಭಾ ತಮ್ಮ ಸಾಮಾಜಿಕ ಜಾಲತಾಣಗಳಿಂದ ಪತಿಯೊಂದಿಗಿನ ಫೋಟೋಗಳನ್ನು ಅಳಿಸಿದ್ದಾರೆ.
ಬಿಗ್ ಬಾಸ್ ಸೀಸನ್ 8 ರ ಮೂಲಕವೂ ಜನಪ್ರಿಯತೆ ಪಡೆದಿದ್ದ ಶುಭಾ ಪೂಂಜಾ ಅವರ ದಾಂಪತ್ಯ ಜೀವನದಲ್ಲಿ ಉಂಟಾದ ಈ ಬೆಳವಣಿಗೆ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.






























