
ಹೆಬ್ರಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಹೆಬ್ರಿ, ಮುದ್ರಾಡಿ ವಲಯದ ಶಿವಶಂಕರಿ ಸ್ವಸಹಾಯ ಸಂಘದ 21ನೇ ವರ್ಷದ ವಾರ್ಷಿಕೋತ್ಸವ ಹಾಗೂ ಪೂಜಾ ಕಾರ್ಯಕ್ರಮವು ಜುಲೈ 26, 2026ರಂದು ವರಂಗದ ಅರ್ಬಿ ಮನೆಯಲ್ಲಿ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವರಂಗದ ವಿಠ್ಠಲ್ ಪೂಜಾರಿ ವಹಿಸಿಕೊಂಡರು. ಮುಖ್ಯ ಅತಿಥಿಗಳಾಗಿ ಹೆಬ್ರಿ ತಾಲೂಕಿನ ಯೋಜನಾಧಿಕಾರಿ ರೇಷ್ಮಾ, ತಾಲೂಕು ಕೃಷಿ ಅಧಿಕಾರಿ ಉಮೇಶ್, ಮೇಲ್ವಿಚಾರಕಿ ಶೋಭಾ, ಗ್ರಾಮವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಚಂದ್ರಾವತಿ, ಸಂಘದ ಅಧ್ಯಕ್ಷ ಶಾಂತರಾಮ್ ಶೆಟ್ಟಿಗಾರ್ ಹಾಗೂ ಪದಾಧಿಕಾರಿಗಳಾದ ಜಯಂತಿ, ಪ್ರಭಾಕರ್, ಮಂಜುನಾಥ್, ಉಷಾ ಎಂ. ಹೆಬ್ಬಾರ್, ರಮೇಶ್ ಶೇರಿಗಾರ್ ಮತ್ತು ಇಂದಿರಾ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಮಾಜ ಸೇವೆ ಹಾಗೂ ಸಂಘದ ಬೆಳವಣಿಗೆಗೆ ನೀಡಿದ ಕೊಡುಗೆಯನ್ನು ಸ್ಮರಿಸಿ ಹಿರಿಯರಾದ ವಿಠ್ಠಲ್ ಪೂಜಾರಿ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದ ಆರಂಭದಲ್ಲಿ ಸೇವಾ ಪ್ರತಿನಿಧಿ ಸಂಧ್ಯಾ ಸ್ವಾಗತಿಸಿದರು. ಸುರೇಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ರಮೇಶ್ ಶೇರಿಗಾರ್ ಧನ್ಯವಾದ ಅರ್ಪಿಸಿದರು. ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.

ವಾರ್ಷಿಕೋತ್ಸವದ ಅಂಗವಾಗಿ ಆಟಿ ತಿಂಗಳ ಸಾಂಪ್ರದಾಯಿಕ ವಿಶೇಷ ಖಾದ್ಯಗಳ ಪ್ರದರ್ಶನ ಏರ್ಪಡಿಸಲಾಗಿದ್ದು, ಬಳಿಕ ಎಲ್ಲರಿಗೂ ಸಹಭೋಜನ ವ್ಯವಸ್ಥೆ ಮಾಡಲಾಗಿತ್ತು. ಈ ಕಾರ್ಯಕ್ರಮವು ಸಂಪ್ರದಾಯ, ಸಹಕಾರ ಮತ್ತು ಸಾಮಾಜಿಕ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವಲ್ಲಿ ವಿಶೇಷ ಮೆರುಗು ಮೂಡಿಸಿತು.


















































