
ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಿಂತಿದ್ದ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅವರು, ಇಂದು(ಮೇ,14) ಬೆಂಗಳೂರಿನ ಅರಮನೆ ರಸ್ತೆಯಲ್ಲಿನ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ಭೇಟಿ ನೀಡಿ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಕ್ರಮವಾಗಿದೆ ಎಂದು ದೂರು ನೀಡಿದ್ದಾರೆ.
ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ಗೆ ಕಣ್ಣೀಟ್ಟಿದ್ದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಹೇಗಾದರೂ ಮಾಡಿ ಅದನ್ನು ಪುತ್ರನಿಗೆ ಕೊಡಿಸುವುದರಲ್ಕಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಟಿಕೆಟ್ ಕೈ ತಪ್ಪಿತ್ತು. ಈ ಹಿನ್ನಲೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರವಾಗಿ ತಾವೇ ಸ್ಪರ್ಧಿಸಿದ್ದಾರೆ. ಅದರಂತೆ ‘ಈ ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಕ್ರಮವಾಗಿದೆ ಎಂದು ಆರೋಪಿಸಿ, ಜೊತೆಗೆ ಪೆನ್ಡ್ರೈವ್ ಅಕ್ರಮದ ಕುರಿತು ಬೆಂಗಳೂರಿನ ಅರಮನೆ ರಸ್ತೆಯಲ್ಲಿನ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ಭೇಟಿ ನೀಡಿ ದೂರು ನೀಡಿದರು.
ಇದೇ ವೇಳೆ ‘ನನ್ನನ್ನು ಬಿಜೆಪಿಯಿಂದ ತಾತ್ಕಾಲಿಕವಾಗಿ ಹೊರ ಹಾಕಿದ್ದಾರೆ. ಈ ಹಿಂದೆ ಜಗದೀಶ್ ಶೆಟ್ಟರ್ ಅವರನ್ನು ಆರು ವರ್ಷ ಹೊರ ಹಾಕಿದ್ದರು. ಯಡಿಯೂರಪ್ಪ ಹೋಗಿ ಕಾಲು ಹಿಡಿದು ಮತ್ತೆ ಕರೆತಂದರು. ನಾನು ಈ ಅಮಾನತನ್ನು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ. ನಾನು ಚುನಾವಣೆ ಗೆಲ್ಲುತ್ತೇನೆ, ಮೋದಿ ಪರ ಕೈ ಎತ್ತುತ್ತೇನೆ ಎಂದು ಹೇಳಿದರು.
‘ಪ್ರಜ್ವಲ್ ಪ್ರಕರಣದ ಬಗ್ಗೆ ಮಾತಾಡಲು ಅಸಹ್ಯವಾಗುತ್ತದೆ. ಇವರ ರಾಜಕೀಯ ಕುತಂತ್ರಕ್ಕೆ ಜನ ತಲೆ ತಗ್ಗಿಸುವಂತಾಗಿದೆ. ಹೆಣ್ಣು ಮುಂದಿಟ್ಟುಕೊಂಡು ರಾಜಕೀಯ ಮಾಡುವವರು ದ್ರೋಹಿಗಳು, ರಾಜ್ಯದಲ್ಲಿ ಹೆಣ್ಣಿನ ಅಪಮಾನದ ಬಗ್ಗೆ ಇಷ್ಟು ಚರ್ಚೆ ಆಗುತ್ತಿದೆ. ಇದು ನಾಚಿಕೆಗೇಡು. ಕೂಡಲೇ ಈ ಪ್ರಜ್ವಲ್ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಸಿಬಿಐಗೆ ಕೊಡಲು ಯಾಕೆ ಸಿಎಂ, ಡಿಸಿಎಂ ಹಿಂಜರಿಯುತಿದ್ದಾರೆ?, ನಿಷ್ಪಕ್ಷಪಾತವಾಗಿ ತನಿಖೆ ನಡೆಯಲು ಸಿಬಿಐಗೆ ವಹಿಸಲಿ ಎಂದು ವಾಗ್ದಾಳಿ ನಡೆಸಿದರು.