
ಕಾರ್ಕಳ: ವೀರಗಾಥ 4.0 ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲಿ ವಿಜೇತರಾಗಿ ಗಣರಾಜ್ಯೋತ್ಸವ ಪೆರೇಡ್ ವೀಕ್ಷಣೆಗೆ ವಿಶೇಷ ಆಹ್ವಾನ ಪಡೆದು, ಸಮಾರಂಭದಲ್ಲಿ ಭಾಗಿಯಾಗಿ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರಿಂದ ಪ್ರಶಸ್ತಿ ಪತ್ರ ಮತ್ತು ಪದಕ ಪಡೆದ ವಿದ್ಯಾರ್ಥಿಗಳಾದ ಹೆಬ್ರಿ ಎಸ್.ಆರ್. ಪಬ್ಲಿಕ್ ಸ್ಕೂಲ್‌ನ ವಿನೀಶ್ ಆಚಾರ್ಯ ಹಾಗೂ ಕಾರ್ಕಳ ಶ್ರೀ ಭುವನೇಂದ್ರ ರೆಸಿಡೆನ್ಶಿಯಲ್ ಸ್ಕೂಲ್‌ನ ಸ್ನಿಗ್ದಾ ಅವರನ್ನು ಶಿಕ್ಷಣ ಇಲಾಖೆಯ ವತಿಯಿಂದ ಸನ್ಮಾನಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜಮ್ಮ ಎಸ್.ಆರ್. ಮತ್ತು ಇತರ ಗಣ್ಯರು ಸನ್ಮಾನಿಸಿದರು.
ರಕ್ಷಣಾ ಸಚಿವಾಲಯ ಮತ್ತು ಶಿಕ್ಷಣ ಸಚಿವಾಲಯ ಸಹಯೋಗದಲ್ಲಿ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಮತ್ತು ದೇಶಭಕ್ತರ ಬಗ್ಗೆ ಅಭಿಮಾನ ಮೂಡಿಸುವ ನಿಟ್ಟಿನಲ್ಲಿ ಗಣರಾಜ್ಯೋತ್ಸವದ ಸಂಭ್ರಮದ ಅಂಗವಾಗಿ ಪ್ರಾಥಮಿಕ, ಪ್ರೌಢ ಮತ್ತು ಪ.ಪೂ. ವಿದ್ಯಾಥಿಗಳಿಗೆ ಗ್ಯಾಲಂಟ್ರಿ ಅವಾರ್ಡ್ಸ್ ಪೋರ್ಟಲ್ ಆಫ್ ಇಂಡಿಯಾ ಈ ಕಾರ್ಯಕ್ರಮ ಆಯೋಜಿಸಿತ್ತು. ದೇಶದಾದ್ಯಂತ 2.31 ಲಕ್ಷ ಶಾಲೆಗಳಿಂದ ಸುಮಾರು 1.76 ಕೋಟಿ ವಿದ್ಯಾರ್ಥಿಗಳು ಭಾಗವಹಿಸಿದ್ದು ರಾಷ್ಟ್ರಮಟ್ಟದಲ್ಲಿ ಆಯ್ಕೆ ಮಾಡಲಾಗುವ 100 ಮಂದಿ ವಿಜೇತರ ಪೈಕಿ ಕರ್ನಾಟಕದಿಂದ ಆಯ್ಕೆಯಾದ 8 ವಿದ್ಯಾರ್ಥಿಗಳಲ್ಲಿ ಉಡುಪಿ ಜಿಲ್ಲೆಯಿಂದ ಈ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.



















