
ಬೆಂಗಳೂರು: ಮೇ 29 ಬುಧವಾರ ತಡರಾತ್ರಿ ನಡೆದ ನಾರ್ವೆ ಚೆಸ್ ಪಂದ್ಯಾವಳಿಯ ಮೂರನೇ ಸುತ್ತಿನಲ್ಲಿ ಭಾರತದ ಉದಯೋನ್ಮುಖ ಚೆಸ್ ತಾರೆ ಆರ್. ಪ್ರಜ್ಞಾನಂದ ಅವರು ವಿಶ್ವ ನಂ.1, ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್‌ಗೆ ಸೋಲುಣಿಸಿದ್ದಾರೆ. ಇದು ಮ್ಯಾಗ್ನಸ್ ವಿರುದ್ಧ ಪ್ರಜ್ಞಾನಂದಗೆ ಒಲಿದ ಮೊದಲ ಗೆಲುವಾಗಿದ್ದು 3 ಸುತ್ತುಗಳ ಬಳಿಕ ಅಂಕಪಟ್ಟಿಯಲ್ಲಿ ಪ್ರಜ್ಞಾನಂದ(5.5) ಮೊದಲ ಸ್ಥಾನ ಪಡೆದಿದ್ದರೆ, ಕಾರ್ಲ್‌ಸನ್(3) 5ನೇ ಸ್ಥಾನಿಯಾಗಿದ್ದಾರೆ.
ಮಹಿಳಾ ವಿಭಾಗದಲ್ಲಿ ಭಾರತದ ಯುವ ಆಟಗಾರ್ತಿ, ಪ್ರಜ್ಞಾನಂದ ಅವರ ಸಹೋದರಿ, ಗ್ರ್ಯಾಂಡ್‌ಮಾಸ್ಟರ್ ಆರ್.ವೈಶಾಲಿ ಕೂಡ ಮುನ್ನಡೆ ಸಾಧಿಸಿದ್ದು ಸ್ವದೇಶದ ಅನುಭವಿ ಆಟಗಾರ್ತಿ ಕೋನೇರು ಹಂಪಿ ಅವರನ್ನು ಸೋಲಿಸಿ ನಾರ್ವೆ ಚೆಸ್ ಟೂರ್ನಿಯ ನಂತರ ಮಹಿಳಾ ವಿಭಾಗದಲ್ಲಿ ಮಂಗಳವಾರ ಅಗ್ರಸ್ಥಾನಕ್ಕೇರಿದ್ದರು. ಆ ಬಳಿಕದ ಪಂದ್ಯದಲ್ಲಿ ಮುಜಿಚುಕ್ ಅವರೊಂದಿಗೆ ಡ್ರಾ ಸಾಧಿಸುವಲ್ಲಿ ಯಶಸ್ವಿಯಾದರು. ಸದ್ಯ ಮಹಿಳಾ ವಿಭಾಗದಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ.
ಈ ಗೆಲುವಿನ ಕುರಿತು ಪ್ರತಿಕ್ರಿಯಿಸಿರುವ ಪ್ರಜ್ಞಾನಂದ, ಅತ್ಯಂತ ಪ್ರಬಲ ಆಟಗಾರನನ್ನು ಸೋಲಿಸಿದರೆ, ಅದು ಯಾವಾಗಲೂ ವಿಶೇಷವಾಗಿರುತ್ತದೆ. ಏಕೆಂದರೆ ಅವರನ್ನು ಸೋಲಿಸುವುದು ಅಷ್ಟು ಸುಲಭವಲ್ಲ. ಚೆಸ್ನಲ್ಲಿ ವಿಶ್ವ ಚಾಂಪಿಯನ್ ವಿರುದ್ಧ ಮೊದಲ ಬಾರಿಗೆ ಗೆದ್ದಿರುವುದು ಖುಷಿ ಕೊಟ್ಟಿದೆ. ಇದೇ ಪ್ರದರ್ಶನವನ್ನು ಮುಂದುವರಿಸುವ ನಂಬಿಕೆ ಇದೆ ಎಂದು ಹೇಳಿದರು.