
ಬೆಂಗಳೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ-2026ರ ಸಿದ್ಧತೆಗಳಿಗೆ ಚಾಲನೆ ದೊರೆತಿದೆ. ಇದೇ ವರ್ಷದ ಅಕ್ಟೋಬರ್ನಲ್ಲಿ ನಡೆಯಲಿರುವ ದಸರಾ ಮಹೋತ್ಸವದ ಉದ್ಘಾಟನೆ ಹಾಗೂ ವಿಜಯದಶಮಿ ಜಂಬೂ ಸವಾರಿಯ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ.
ವೇಳಾಪಟ್ಟಿಯ ಪ್ರಕಾರ, ಅಕ್ಟೋಬರ್ 11ರಂದು ಬೆಳಗ್ಗೆ 11:50ಕ್ಕೆ ಶುಭ ಧನುರ್ ಲಗ್ನದಲ್ಲಿ ಚಾಮುಂಡಿ ಬೆಟ್ಟದಲ್ಲಿ ದಸರಾ ಮಹೋತ್ಸವದ ಉದ್ಘಾಟನೆ ನಡೆಯಲಿದೆ. ಅಕ್ಟೋಬರ್ 21ರಂದು ಸಂಜೆ 4:10ರಿಂದ 4:35ರೊಳಗಿನ ಶುಭ ಮುಹೂರ್ತದಲ್ಲಿ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿರುವ ಶ್ರೀ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಸಲ್ಲಿಸಲಾಗುವುದು. ಬಳಿಕ ವೈಭವಮಯ ಜಂಬೂ ಸವಾರಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಲಿದೆ.
ಇದೇ ವೇಳೆ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆಯ ಆನೆಗಳು ಆಗಸ್ಟ್ ತಿಂಗಳ ಕೊನೆಯ ವಾರದಲ್ಲಿ ಮೈಸೂರಿನ ಅರಮನೆ ನಗರಿಗೆ ಆಗಮಿಸಲಿವೆ. ಆಗಸ್ಟ್ 26ರಂದು ಅರಮನೆ ಪ್ರವೇಶ ದ್ವಾರದಲ್ಲಿ ಗಜಪಡೆಗೆ ಸಂಪ್ರದಾಯದಂತೆ ವಿಶೇಷ ಪೂಜೆ ನೆರವೇರಿಸಿ, ದಸರಾ ಸಿದ್ಧತೆ ನಡೆಸಲಾಗುತ್ತದೆ.











































