
ಬೆಂಗಳೂರು : ವಿದ್ಯುತ್ ಸ್ಮಾರ್ಟ್ ಮೀಟರ್ ಅಳವಡಿಕೆ ಹಗರಣ ರಾಜ್ಯದ ೬೦ ಪರ್ಸೆಂಟ್ ಸರ್ಕಾರದ ಮತ್ತೊಂದು ಸಾಧನೆಯಾಗಿದ್ದು, ಇಂಧನ ಸಚಿವ ಕೆ.ಜೆ.ಜಾರ್ಜ್ ಅವರೇ ನೀವು ಎಷ್ಟೇ ಸ್ಪಷ್ಟೀಕರಣ ನೀಡಿದರೂ ಮುಚ್ಚಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ ಎಂದು ಮಾಜಿ ಇಂಧನ ಸಚಿವ ವಿ.ಸುನೀಲ್ ಕುಮಾರ್ ಟೀಕಿಸಿದ್ದಾರೆ.
ಇದು ಇಂಧನ ಇಲಾಖೆಯಲ್ಲಿ ನಡೆದ ಅತಿದೊಡ್ಡ ಹಗರಣವಾಗಿದ್ದು, ದೇಶದ ಯಾವುದೇ ರಾಜ್ಯದಲ್ಲಿ 9200 ರೂ. ನ್ನು ಸ್ಮಾರ್ಟ್ ಮೀಟರ್ ಅಳವಡಿಕೆಗೆ ನಿಗದಿ ಮಾಡಿದ ಉದಾಹರಣೆ ಇಲ್ಲ. ಇದು ಜನರ ಮೇಲೆ ಹೇರುತ್ತಿರುವ ಬೆಲೆ ಏರಿಕೆಯ ನೇರ ಬರೆಯಾಗಿದೆ ಎಂದು ಟೀಕಿಸಿದ್ದಾರೆ.
ಸಚಿವ ಜಾರ್ಜ್ ಅವರು ಎಷ್ಡೇ ಸಮರ್ಥನೆ ಮಾಡಿಕೊಂಡರೂ ನಡೆದ ಅವ್ಯವಹಾರವನ್ನು ಮುಚ್ಚಿಡುವುದಕ್ಕೆ ಸಾಧ್ಯವೇ ಇಲ್ಲ.ಕಪ್ಪು ಪಟ್ಟಿಗೆ ಸೇರಿದ ಕಂಪನಿಯನ್ನು ನೀವು ಈ ಪರಿಯಾಗಿ ಸಮರ್ಥಿಸಿಕೊಳ್ಳುವುದು ‘ಕುಂಬಳ ಕಾಯಿ ಕಳ್ಳ’ ನ ಕತೆಯಂತಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ವಿದ್ಯುತ್ ಸ್ಮಾರ್ಟ್ ಮೀಟರ್ ಹಗರಣ ಗ್ರಾಹಕರಿಗೆ ಕರೆಂಟ್ ಶಾಕ್. ಈ ಹಗರಣದ ಹಿಂದೆ ಜಾರ್ಜ್ ಅವರ ” ಸನ್ ಸ್ಟ್ರೋಕ್ ” ಹೆಚ್ಚು ಪ್ರಭಾವ ಬೀರಿದಂತೆ ಕಾಣುತ್ತಿದೆ ಎಂದು ಇಡಿ ಇಂಧನ ಇಲಾಖೆ ಮಾತನಾಡುತ್ತಿದೆ. ಅನರ್ಹ ಕಂಪನಿಗೆ ಕರ್ನಾಟಕ ಪಾರದರ್ಶಕ ಕಾಯ್ದೆಯ ಎಲ್ಲ ನಿಯಮ ಉಲ್ಲಂಘಿಸಿ ನೀಡಿದ ಟೆಂಡರ್ ನ್ನು ತಕ್ಷಣ ರದ್ದುಪಡಿಸುವಂತೆ ಆಗ್ರಹಿಸಿದ್ದಾರೆ.