
ಉತ್ತರ ಕನ್ನಡ: ಇತ್ತೀಚೆಗೆ ಕೊಲಾರ ಜಿಲ್ಲೆಯ ಅಮಾಯಕ ನಾಲ್ವರು ವಿದ್ಯಾರ್ಥಿನಿಯರು ಪ್ರವಾಸಕ್ಕೆಔದು ಬಂದು ಸಮುದ್ರದಲ್ಲಿ ಸಾವನಪ್ಪಿದಾಗ, ಜಿಲ್ಲಾ ಮಂತ್ರಿ ಸೇರಿದಂತೆ ಎಲ್ಲರನ್ನೂ ಕೋಲಾರ ಶಾಸಕ ಬಹಿರಂಗವಾಗಿ ತರಾಟೆಗೆ ತೆಗೆದುಕೊಂಡ ಬಳಿಕ ಎಚ್ಚೆತ್ತುಕೊಂಡಿರುವ ಉತ್ತರ ಕನ್ನಡ ಜಿಲ್ಲಾಡಳಿತ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಲು ನಿರ್ಧರಿಸಿದೆ.
ಡಿಸೆಂಬರ್ 11 ರಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕೊತ್ತುರು ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿಯರು ಮುರುಡೇಶ್ವರ ಕಡಲ ತೀರದಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ ಬೆನ್ನಲ್ಲೇ ಮುರುಡೇಶ್ವರ ಕಡಲ ತೀರಕ್ಕೆ ಸಾರ್ವಜನಿಕರಿಗೆ ಸಂಪೂರ್ಣ ನಿಷೇಧ ಹೇರಲಾಗಿದ್ದು ಸದ್ಯ ಪ್ರವಾಸಿಗರ ಸುರಕ್ಷತೆಯ ವಿಚಾರವನ್ನ ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ, ಮುರುಡೇಶ್ವರ ಸೇರಿದಂತೆ ಜಿಲ್ಲೆಯ ಪ್ರಮುಖ ಕಡಲ ತೀರಗಳಲ್ಲಿ ಸರ್ವೇ ಮಾಡಿ ಅಪಾಯ ಹೊಂದಿರುವ ಮತ್ತು ಅಪಾಯವಲ್ಲದ ಜಾಗವನ್ನ ಗುರುತಿಸಿ ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಕಳೆದ ಹತ್ತು ದಿನಗಳಿಂದ ಸರಣಿ ಸಭೆ ಮಾಡುತ್ತಿರುವ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ, ಜಿಲ್ಲಾಧಿಕಾರಿ ಸೇರಿದಂತೆ ಕರಾವಳಿ ಕಾವಲು ಪಡೆ, ಪೊಲೀಸ್ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಕಂದಾಯ ಇಲಾಖೆ ಹಾಗೂ ಸಂಬಂಧ ಪಟ್ಟ ಸ್ಥಳೀಯ ಪಂಚಾಯತ ಅಧಿಕಾರಿಗಳನ್ನು ಸೇರಿಸಿ ಒಂದು ಸಮಿತಿ ರಚನೆಗೆ ಮುಂದಾಗಿದ್ದು ಅವರ ಸಲಹೆ ಮೇರೆಗೆ ಆಯಾ ಪ್ರವಾಸಿ ತಾಣಕ್ಕೆ ವಿಶೇಷ ನಿಯಮ ಜಾರಿಗೆ ತಂದು ಪ್ರವಾಸಿಗರ ಸುರಕ್ಷತೆ ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ.