
ನಟಿ ರಮ್ಯಾ ಅವರು ಸದ್ಯ ನಟನೆಯಿಂದ ದೂರ ಉಳಿದಿದ್ದು ದರ್ಶನ್ ಕೊಲೆ ಕೇಸ್, ಯಡಿಯೂರಪ್ಪ ವಿರುದ್ಧ ಪೋಕ್ಸೋ ಕಾಯ್ದೆ, ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಕೇಸ್, ಸೂರಜ್ ರೇವಣ್ಣ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣಗಳ ಬಗ್ಗೆ ಟ್ವೀಟ್ ಮಾಡಿದ್ದಾರೆ.
‘ಉತ್ತರಕಾಂಡ’ ಸಿನಿಮಾದಲ್ಲಿ ನಟಿಸಬೇಕಿದ್ದ ರಮ್ಯಾ ಅವರು ಚಿತ್ರದಿಂದ ಹಿಂದೆ ಸರಿದು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ.
‘ಸುದ್ದಿಯಲ್ಲಿರುವ ಕಾನೂನನ್ನು ಮುರಿಯುವವರು, ಶ್ರೀಮಂತರು ಮತ್ತು ಶಕ್ತಿಶಾಲಿಗಳು ಮತ್ತು ಅವರ ಹಿಂಸಾತ್ಮಕ ಕ್ರಿಯೆಗಳಿಂದ ತೊಂದರೆ ಅನುಭವಿಸಿದವರು ಬಡವರು, ಮಹಿಳೆಯರು ಮತ್ತು ಮಕ್ಕಳು ಹಾಗೂ ಕರ್ನಾಟಕದ ಜನಸಾಮಾನ್ಯರು. ಈ ಅಪರಾಧಗಳನ್ನು ಹೊರಗೆ ತಂದ ಪೊಲೀಸರಿಗೆ ಮತ್ತು ಮಾಧ್ಯಮಗಳಿಗೆ ಹ್ಯಾಟ್ಸ್ ಆಫ್. ವಿಚಾರಣೆ ಪೂರ್ಣಗೊಂಡು ಪ್ರಕರಣಕ್ಕೆ ತಾರ್ಕಿಕ ತೀರ್ಮಾನ ಸಿಕ್ಕರೆ ನ್ಯಾಯ ಸಿಕ್ಕಂತೆ ಆಗುತ್ತದೆ. ನ್ಯಾಯ ಸಿಗದಿದ್ದರೆ ಸಾರ್ವಜನಿಕರಿಗೆ ನಾವೇನು ಸಂದೇಶ ನೀಡುತ್ತಿದ್ದೇವೆ?’ ಎಂದು ರಮ್ಯಾ ಪ್ರಶ್ನಿಸಿದ್ದಾರೆ.
ಇದರ ಜೊತೆಗೆ ದರ್ಶನ್, ಯಡಿಯೂರಪ್ಪ, ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ ಹ್ಯಾಶ್ ಟ್ಯಾಗ್ ಹಾಕಿದ ರಮ್ಯಾ ಈ ಮೊದಲು ದರ್ಶನ್ ಬಗ್ಗೆ ಪೋಸ್ಟ್ ಮಾಡಿ ‘ಕಾನೂನಿಗಿಂತ ಯಾರೂ ಕೂಡ ದೊಡ್ಡವರಲ್ಲ. ಕಾನೂನನ್ನು ಯಾರೂ ತಮ್ಮ ಕೈಗೆ ತೆಗೆದುಕೊಳ್ಳಬಾರದು. ಜನರನ್ನು ನೀವು ಹೋಗಿ ಹೊಡೆದು ಕೊಲ್ಲುವುದಲ್ಲ. ಒಂದು ಸರಳವಾದ ದೂರು ಸಾಕು. ಈಗ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳಿಗೆ ನಾನು ಮೆಚ್ಚುಗೆ ಮತ್ತು ಗೌರವ ಸಲ್ಲಿಸುತ್ತೇನೆ. ಅವರದ್ದು ಕೃತಜ್ಞತೆ ಇಲ್ಲದ ಕೆಲಸ. ಅತ್ಯುತ್ತಮವಾಗಿ ಅವರು ಕೆಲಸ ಮಾಡುತ್ತಿದ್ದಾರೆ. ರಾಜಕೀಯ ಪಕ್ಷಗಳ ಒತ್ತಡಕ್ಕೆ ಅವರು ಮಣಿಯುವುದಿಲ್ಲ ಹಾಗೂ ಕಾನೂನಿನ ಮೇಲೆ ಜನರ ಭರವಸೆಯನ್ನು ಉಳಿಸುತ್ತಾರೆ ಅಂತ ನಾನು ನಂಬಿದ್ದೇನೆ’ಎಂದು ಅವರು ಹೇಳಿದ್ದರು.