
ಬೆಂಗಳೂರು: ವಾಲ್ಮೀಕಿ ನಿಗಮದ ಹಗರಣದ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಶುಕ್ರವಾರ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದು ‘ಇತ್ತೀಚಿಗೆ ನಡೆದ 187 ಕೋಟಿ ಭ್ರಷ್ಟಾಚಾರ ಪ್ರಕರಣ ಹಿನ್ನೆಲೆ ಸಚಿವ ಬಿ ನಾಗೇಂದ್ರ ಅವರ ರಾಜೀನಾಮೆಯಿಂದ ನಾವು ಸುಮ್ಮನಾಗುವ ಪ್ರಶ್ನೆಯೇ ಇಲ್ಲ. ಇಷ್ಟೊಂದು ದೊಡ್ಡ ಮೊತ್ತದ ಅವ್ಯವಹಾರದ ಹಿಂದೆ ಇರುವಂತಹ ಆ ಕೈಗಳು ಯಾವುದು ಎಂದು ಬಯಲಾಗಬೇಕು. ಅಲ್ಲಿಯವರೆಗೆ ನಮ್ಮ ಹೋರಾಟ ಮುಂದುವರಿಸುತ್ತೇವೆ’ ಎಂದು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ನಾಗೇಂದ್ರ ಅವರ ರಾಜೀನಾಮೆಯ ಬಳಿಕ ಅಧಿಕಾರಿಗಳ ಮೇಲೆ ಆರೋಪ ಮಾಡಿ ತೇಪೆ ಹಾಕಲು ಮುಂದಾಗಿದ್ದು ಇದರ ವಿರುದ್ಧ ಇಂದಿನಿಂದ ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳ ಕಚೇರಿಗೆ ಬಿಜೆಪಿ ನಾಯಕರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಿದ್ದೇವೆ. ಮಾತ್ರವಲ್ಲದೆ ರಾಜ್ಯ ಸರ್ಕಾರವು ಪೆಟ್ರೋಲ್, ಡೀಸೆಲ್, ಹಾಲು ಸೇರಿದಂತೆ ದಿನನಿತ್ಯ ಬಳಸುವ ವಸ್ತುಗಳ ಬೆಲೆ ಏರಿಕೆ ಮಾಡಿದ್ದು ಇದರಿಂದ ರೈತರಿಗೆ ಸಂಕಷ್ಟ ಎದುರಾಗಿದೆ. ಹೀಗಾಗಿ ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿಭಟನೆ ನಡೆಸಲಿದ್ದೇವೆ ಎಂದು ಹೇಳಿದ್ದಾರೆ.