
ಅಯೋಧ್ಯೆ: ರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದ ಹಿನ್ನೆಲೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ರಾಜೀನಾಮೆಯನ್ನು ಟ್ರಸ್ಟ್ ಅಂಗೀಕರಿಸಿದೆ. ರಾಮ ಜನ್ಮಭೂಮಿ ಸಂಕೀರ್ಣದ ಅತಿಥಿಗೃಹದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಟ್ರಸ್ಟಿ ಡಾ. ಅನಿಲ್ ಮಿಶ್ರಾ ಅವರ ರಾಜೀನಾಮೆಯನ್ನೂ ಸ್ವೀಕರಿಸಲಾಯಿತು.
ಈ ಘಟನೆ ತೀವ್ರ ನೋವುಂಟು ಮಾಡಿದೆ ಎಂದು ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಹೇಳಿದ್ದಾರೆ. ತಪ್ಪಿತಸ್ಥರಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಠಿಣ ಶಿಕ್ಷೆ ವಿಧಿಸುವ ವಿಶ್ವಾಸವಿದೆ. ಇದು ಕೋಟ್ಯಂತರ ಹಿಂದೂಗಳ ಭಾವನೆಗೆ ಸಂಬಂಧಿಸಿದ ವಿಷಯವಾಗಿರುವುದರಿಂದ ರಾಜಕೀಯ ಮಾಡಬಾರದು ಎಂದು ಅವರು ಮನವಿ ಮಾಡಿದರು.
ಚಂಪತ್ ರಾಯ್ ಅವರ ಸ್ಥಾನಕ್ಕೆ ನಿವೃತ್ತ ಐಎಫ್‌ಎಸ್ ಅಧಿಕಾರಿ ಕೃಷ್ಣ ಮೋಹನ್ ಅವರನ್ನು ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ಟ್ರಸ್ಟ್ ನೇಮಿಸಿದೆ. ರಾಮ ಮಂದಿರದ ದೈನಂದಿನ ಆಡಳಿತದ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿದ್ದು, ಟ್ರಸ್ಟ್‌ನ ಆಡಳಿತ ವ್ಯವಸ್ಥೆಯ ಸಮಗ್ರ ಪರಿಶೀಲನೆಯನ್ನೂ ಘೋಷಿಸಲಾಗಿದೆ.
ಉತ್ತರ ಪ್ರದೇಶದ ಹಾರ್ದೋಯ್ ಜಿಲ್ಲೆಯ ಚಂದ್ರಾಪುರ ಗ್ರಾಮದವರಾದ ಕೃಷ್ಣ ಮೋಹನ್ ಅವರನ್ನು ಟ್ರಸ್ಟ್ ಸದಸ್ಯರ ಸರ್ವಾನುಮತದ ನಿರ್ಧಾರದಿಂದ ಟ್ರಸ್ಟಿಯಾಗಿ ನೇಮಕ ಮಾಡಲಾಗಿದೆ.





















































































