ದೇವೇಗೌಡರ ನಿರೀಕ್ಷೆಗೆ ತೆರೆ

ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ರಾಜ್ಯಸಭೆ ಪುನರಾಯ್ಕೆಯ ಕುರಿತಿದ್ದ ಊಹಾಪೋಹಗಳಿಗೆ ಬಿಜೆಪಿ ತೆರೆ ಎಳೆದಿದೆ. ರಾಜ್ಯಸಭೆ ಚುನಾವಣೆಗೆ ಒಬಿಸಿ ನಾಯಕ ಹಾಗೂ ಶಿಕ್ಷಣ ತಜ್ಞ ಪ್ರೊ. ಎಂ. ನಾಗರಾಜ ಅವರನ್ನು ಪಕ್ಷ ಅಭ್ಯರ್ಥಿಯಾಗಿ ಘೋಷಿಸಿದೆ. ದೇವೇಗೌಡ ಅವರು ಜೂನ್ 25ರಂದು ರಾಜ್ಯಸಭಾ ಸದಸ್ಯತ್ವದಿಂದ ನಿವೃತ್ತರಾಗಲಿದ್ದಾರೆ.
ಆರ್‌ಎಸ್‌ಎಸ್ ಹಿನ್ನೆಲೆಯುಳ್ಳ ಪ್ರೊ. ನಾಗರಾಜ್ ಅವರ ಹೆಸರನ್ನು ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯು ಅನುಮೋದಿಸಿದೆ. ಇದರಿಂದ ಮತ್ತೊಮ್ಮೆ ರಾಜ್ಯಸಭೆ ಪ್ರವೇಶದ ನಿರೀಕ್ಷೆಯಲ್ಲಿದ್ದ ದೇವೇಗೌಡ ಹಾಗೂ ಜೆಡಿಎಸ್‌ಗೆ ಹಿನ್ನಡೆಯಾಗಿದೆ.
ಇದರ ಜೊತೆಗೆ ಕರ್ನಾಟಕ ವಿಧಾನ ಪರಿಷತ್ತಿನ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನೂ ಪ್ರಕಟಿಸಿದೆ. ಲಿಂಗರಾಜ್ ಪಾಟೀಲ್ ಮತ್ತು ರಘು ಕೌಟಿಲ್ಯ ಅವರನ್ನು ಪಕ್ಷ ಕಣಕ್ಕಿಳಿಸಿದೆ.
ರಘು ಕೌಟಿಲ್ಯ ಪ್ರಸ್ತುತ ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯಾಧ್ಯಕ್ಷರಾಗಿದ್ದು, ಲಿಂಗರಾಜ್ ಪಾಟೀಲ್ ಬಿಜೆಪಿ ರಾಜ್ಯ ಶಿಸ್ತು ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಅರುಣಾಚಲ ಪ್ರದೇಶ, ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ, ಮಣಿಪುರ ಹಾಗೂ ಕರ್ನಾಟಕ ಸೇರಿ 10 ರಾಜ್ಯಗಳ 24 ರಾಜ್ಯಸಭಾ ಸ್ಥಾನಗಳಿಗೆ ಜೂನ್ 18ರಂದು ಚುನಾವಣೆ ನಡೆಯಲಿದ್ದು, ಕರ್ನಾಟಕ ವಿಧಾನ ಪರಿಷತ್ ಚುನಾವಣೆಯೂ ಅದೇ ದಿನ ನಡೆಯಲಿದೆ.
































