
ಬೆಂಗಳೂರು: ಸರ್ಕಾರವು ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 2024-25ನೇ ಸಾಲಿನಲ್ಲಿ 1ರಿಂದ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ 42.52 ಲಕ್ಷ ಮಕ್ಕಳಿಗೆ ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್ ಖರೀದಿಗೆ 121 ಕೋಟಿ ರು. ಬಿಡುಗಡೆಗೊಳಿಸಿದೆ.
ಈ ಪೈಕಿ ಸರ್ಕಾರಿ ಶಾಲೆಗಳಲ್ಲಿನ ಪರಿಶಿಷ್ಟ ಜಾತಿ, ಪಂಗಡ ಹಾಗೂ ಬುಡಕಟ್ಟು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ಪಂಗಡದ ವಿಶೇಷ ಘಟಕ ಯೋಜನೆ(ಎಸ್ಸಿಪಿ)ಯಿಂದ 30 ಕೋಟಿ ರು. ಮತ್ತು ಬುಡಕಟ್ಟು ಉಪ ಯೋಜನೆಯಿಂದ (ಟಿಎಸ್‌ಪಿ) 14 ಕೋಟಿ ರು. ಹಣವನ್ನು ವಿದ್ಯಾರ್ಥಿಗಳ ಶೂ, ಸಾಕ್ಸ್ ಖರೀದಿಗೆ ಬಳಕೆ ಮಾಡಲಾಗಿದೆ.
ಪ್ರತಿ ಮಗುವಿಗೂ ಉತ್ತಮ ಗುಣಮಟ್ಟದ ಒಂದು ಜೊತೆ ಕಪ್ಪು ಶೂ, ಎರಡು ಜೊತೆ ಬಿಳಿ ಸಾಕ್ಸ್ ಖರೀದಿಸಬೇಕು. ಸ್ಥಳೀಯ ವಾತಾವರಣಕ್ಕೆ ಅನುಗುಣವಾಗಿ ಶೂ ಮತ್ತು ಸಾಕ್ಸ್‌ಗಳ ಬದಲಾಗಿ ಅಗತ್ಯವೆನಿಸಿದರೆ ಪಾದರಕ್ಷೆಗಳನ್ನು ಸಹ ಖರೀದಿ ಮಾಡಬಹುದು ಎಂದು ಶಾಲಾ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ಆಯಾ ಶಾಲಾ ಎಸ್‌ಡಿಎಂಸಿಗಳ ಜಂಟಿ ಖಾತೆಗೆ ಅನುದಾನವನ್ನು ಬಿಡುಗಡೆ ಮಾಡಲಾಗುತ್ತಿದ್ದು ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಅಳತೆಗೆ ಅನುಗುಣವಾಗಿ ಉತ್ತಮ ಗುಣಮಟ್ಟದ ಶೂ, ಸಾಕ್ಸ್ ಖರೀದಿಸಲು ಆಯಾ ಶಾಲೆಗಳ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ(ಎಸ್‌ಡಿಎಂಸಿ) ಮೂಲಕ ಖರೀದಿ ಸಮಿತಿಯನ್ನು ರಚಿಸಬೇಕು. ಎಸ್‌ಡಿಎಂಸಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಖರೀದಿ ಸಮಿತಿ ರಚಿಸಬೇಕು. ಶಾಲೆಯ ಮುಖ್ಯೋಪಾಧ್ಯಾಯರು ಸದಸ್ಯ ಕಾರ್ಯದರ್ಶಿಯಾಗಿರಬೇಕು. ಜೊತೆಗೆ ಓರ್ವ ಮಹಿಳಾ ಸದಸ್ಯೆ ಸೇರಿದಂತೆ ಮೂವರು ಸದಸ್ಯರನ್ನು ಸಮಿತಿ ಒಳಗೊಂಡಿರಬೇಕು ಎಂದು ಸರ್ಕಾರ ತಿಳಿಸಿದೆ.