
ಮಂಗಳೂರು: ಮಂಗಳೂರಿನ ಕಂಕನಾಡಿಯ ಮಸೀದಿ ಬಳಿಯ ರಸ್ತೆಯಲ್ಲಿ ಮೇ 24ರಂದು ಕೆಲ ಅನ್ಯಕೋಮಿನ ಯುವಕರು ನಡು ರಸ್ತೆಯಲ್ಲಿ ನಮಾಜ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮೊಟೋ ಕೇಸ್ ದಾಖಲಿಸಿದ್ದಕ್ಕಾಗಿ ಆಕ್ಷೇಪ ಹಿನ್ನೆಲೆ ಕದ್ರಿ ಪಿಐ ಸೋಮಶೇಖರ್‌ಗೆ ಕಡ್ಡಾಯ ರಜೆ ಶಿಕ್ಷೆ ಆದೇಶಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಬಿ ರಿಪೋರ್ಟ್ ಮಾಡಿ ಕೇಸ್ ರದ್ದು ಮಾಡಿದ್ದಾರೆ.
ಪೊಲೀಸರ ವಿರುದ್ಧ ತನಿಖೆ ಮಾಡಲು ಎಸಿಪಿ ದರ್ಜೆಯ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ನಡು ರಸ್ತೆಯಲ್ಲಿ ನಮಾಜ್ ಮಾಡಿದ ಹಿನ್ನೆಲೆ ಸಾರ್ವಜನಿಕರಿಗೆ ತೊಂದರೆಯುಂಟಾಗಿದ್ದು ಹೀಗಾಗಿ ಕದ್ರಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ (ಸುಮೊಟೋ) ದಾಖಲಿಸಿಕೊಂಡಿದ್ದರು. ಐಪಿಸಿ ಸೆಕ್ಷನ್ 341 (ಅಕ್ರಮ ಪ್ರತಿಬಂಧಕ್ಕಾಗಿ ದಂಡನೆ), 283 (ಸಾರ್ವಜನಿಕ ರಸ್ತೆಯಲ್ಲಿ ಅಡ್ಡಿ) ,143 (ವಿಧಿವಿರುದ್ಧ ಕೂಟದ ಸದಸ್ಯ) ,149 (ಏಕೋದ್ದೇಶವನ್ನು ಈಡೇರಿಸುವಲ್ಲಿ ಮಾಡಲಾದ ಅಪರಾಧದ ಬಗ್ಗೆ ವಿಧಿವಿರುದ್ಧ ಕೂಟದ ಪ್ರತಿಯೊಬ್ಬ ಸದಸ್ಯನು ತಪ್ಪಿತಸ್ಥನಾಗಿರುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಇದಕ್ಕೆ ಕರಾವಳಿಯ ಕಾಂಗ್ರೆಸ್ ಅಲ್ಪಸಂಖ್ಯಾತರು, ಮುಸ್ಲಿಂ ವಲಯ ಮತ್ತು ಪ್ರಗತಿಪರರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.