
ನವದೆಹಲಿ: ಆರ್ಬಿಐ ತೆರಿಗೆ ಪಾವತಿಯನ್ನು ಸುಲಭಗೊಳಿಸಲು ಕ್ರಮ ಕೈಗೊಂಡಿದ್ದು, ಯುಪಿಐ ಟ್ಯಾಕ್ಸ್ ಪೇಮೆಂಟ್ ಮಿತಿಯನ್ನು 1 ಲಕ್ಷ ರೂನಿಂದ 5 ಲಕ್ಷ ರೂಗೆ ಹೆಚ್ಚಿಸಿದೆ ಎಂದು ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.
ಸದ್ಯಕ್ಕೆ ಯುಪಿಐ ಮೂಲಕ 1 ಲಕ್ಷ ರೂವರೆಗೆ ಹಣ ಕಳುಹಿಸಬಹುದು. ಈಗ ತೆರಿಗೆ ಪಾವತಿಗಾಗಿ ಯುಪಿಐ ಮೂಲಕ 5 ಲಕ್ಷ ರೂವರೆಗೆ ಹಣ ಕಳುಹಿಸಲು ಸಾಧ್ಯ. ಒಂದು ವಹಿವಾಟಿನಲ್ಲಿ ಈಗ ನೀವು 5 ಲಕ್ಷ ರೂವರೆಗೆ ತೆರಿಗೆ ಪಾವತಿ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.2023ರ ಡಿಸೆಂಬರ್ನಲ್ಲಿ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಯುಪಿಐ ಮೂಲಕ ಮಾಡಲಾಗುವ ಹಣ ಪಾವತಿ ಮಿತಿಯನ್ನು 1 ಲಕ್ಷ ರೂನಿಂದ 5 ಲಕ್ಷ ರೂಗೆ ಹೆಚ್ಚಿಸಲಾಗಿತ್ತು. ಈಗ ತೆರಿಗೆ ಪಾವತಿ ಕಾರ್ಯವನ್ನು ಸುಗಮಗೊಳಿಸಲು ಟ್ಯಾಕ್ಸ್ ಪೇಮೆಂಟ್ ಮಿತಿಯನ್ನೂ 5 ಲಕ್ಷ ರೂಗೆ ಹೆಚ್ಚಿಸಲಾಗಿದೆ.
ಇದಲ್ಲದೆ ಯುಪಿಐ ಮೂಲಕ ಡೆಲಿಗೇಟೆಡ್ ಪೇಮೆಂಟ್ಸ್ ಅಥವಾ ನಿಯೋಜಿತ ಪಾವತಿ ವ್ಯವಸ್ಥೆಯನ್ನು ಆರ್ಬಿಐ ಪರಿಚಯಿಸಲಿರುವುದನ್ನು ಶಕ್ತಿಕಾಂತ ದಾಸ್ ತಿಳಿಸಿದ್ದು ಇದರ ಉಪಯೋಗವೇನೆಂದರೆ ಇದು ಒಬ್ಬ ಬ್ಯಾಂಕ್ ಖಾತೆಯನ್ನು ಮತ್ತೊಬ್ಬ ವ್ಯಕ್ತಿ ಬಳಸಲು ಅನುವು ಮಾಡಿಕೊಡುವ ಒಂದು ರೀತಿಯ ಫೀಚರ್ ಆಗಿದೆ.ಉದಾಹರಣೆಗೆ, ಒಂದು ಬ್ಯಾಂಕ್ ಖಾತೆಯನ್ನು ಹೊಂದಿರುವ ವ್ಯಕ್ತಿಯನ್ನು ಪ್ರಾಥಮಿಕ ಬಳಕೆದಾರ ಎಂದು ಪರಿಗಣಿಸಬಹುದು. ಇವರು ತಮ್ಮ ಬ್ಯಾಂಕ್ ಖಾತೆಯನ್ನು ಯುಪಿಐ ಮೂಲಕ ಸೀಮಿತ ಪ್ರಮಾಣದಲ್ಲಿ ಬಳಸಲು ಎರಡನೇ ವ್ಯಕ್ತಿಗೆ ಅವಕಾಶ ಕೊಡಬಹುದು. ಯುಪಿಐ ವಹಿವಾಟು ಎಷ್ಟು ಮೊತ್ತಕ್ಕೆ ಸೀಮಿತ ಆಗಬೇಕು ಎಂಬುದನ್ನು ಪ್ರಾಥಮಿಕ ಸದಸ್ಯ ನಿರ್ಧರಿಸಬಹುದಾಗಿದೆ













