ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ಎನ್ಟಿಎಗೆ ಸುಪ್ರೀಂಕೋರ್ಟ್ ತರಾಟೆ

ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ನೀಟ್-ಯುಜಿ ಮರುಪರೀಕ್ಷೆಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಯಾವುದೇ ಲೋಪಗಳಿಲ್ಲದೆ ಬೃಹತ್ ಪ್ರಮಾಣದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸುತ್ತಿರುವ ಯುಪಿಎಸ್ಸಿಯನ್ನು ಎನ್ಟಿಎ ಮಾದರಿಯಾಗಿ ಪರಿಗಣಿಸಬೇಕು ಎಂದು ಸೂಚಿಸಿತು. ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಹಾಗೂ ಅಲೋಕ್ ಆರಾಧೆ ಅವರಿದ್ದ ಪೀಠ, ಹಲವು ದಶಕಗಳಿಂದ ಯುಪಿಎಸ್ಸಿ ಪರೀಕ್ಷೆಗಳನ್ನು ನಡೆಸುತ್ತಿದ್ದರೂ ಇಂತಹ ವಿವಾದಗಳು ಎದುರಾಗಿಲ್ಲ ಎಂದು ಅಭಿಪ್ರಾಯಪಟ್ಟಿತು.
ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಯುವಜನರ ಭವಿಷ್ಯದ ಬಗ್ಗೆ ಸರ್ಕಾರ ಗಂಭೀರ ಕಾಳಜಿ ವಹಿಸಿದ್ದು, ಜೂನ್ 21ರಂದು ನಡೆಯಲಿರುವ ನೀಟ್-ಯುಜಿ ಮರುಪರೀಕ್ಷೆಯನ್ನು ದೋಷರಹಿತವಾಗಿ ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರೇ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ತಪ್ಪಿತಸ್ಥರ ವಿರುದ್ಧ ಹೊಣೆಗಾರಿಕೆ ನಿಗದಿಪಡಿಸದಿದ್ದರೆ ಇಂತಹ ಸಮಸ್ಯೆಗಳು ಮರುಕಳಿಸುತ್ತಲೇ ಇರುತ್ತವೆ ಎಂದು ಎಚ್ಚರಿಸಿತು.
ಈ ವೇಳೆ ನ್ಯಾಯಾಲಯದಲ್ಲಿ ಹಾಜರಿದ್ದ ಇಸ್ರೋ ಮಾಜಿ ಅಧ್ಯಕ್ಷ ಹಾಗೂ ಮೇಲ್ವಿಚಾರಣಾ ಸಮಿತಿ ಮುಖ್ಯಸ್ಥ ಡಾ. ಕೆ. ರಾಧಾಕೃಷ್ಣನ್ ಅವರನ್ನು ಪ್ರಶ್ನಿಸಿದ ಪೀಠ, ಸಮಿತಿಯ ಹಲವು ಶಿಫಾರಸುಗಳಿದ್ದರೂ ಪ್ರಶ್ನೆಪತ್ರಿಕೆ ಸೋರಿಕೆ ಹೇಗೆ ನಡೆಯಿತು ಎಂದು ಕೇಳಿತು. ಶಿಫಾರಸುಗಳಲ್ಲಿ ದೋಷವಿರಬಹುದು ಅಥವಾ ಅವುಗಳನ್ನು ಸಮರ್ಪಕವಾಗಿ ಜಾರಿಗೊಳಿಸದೇ ಇರಬಹುದು ಎಂದು ಅಭಿಪ್ರಾಯಪಟ್ಟ ನ್ಯಾಯಾಲಯಕ್ಕೆ ಪ್ರತಿಕ್ರಿಯಿಸಿದ ರಾಧಾಕೃಷ್ಣನ್, ನೀಟ್ ಸುಧಾರಣೆಗೆ ನೀಡಲಾದ ಬಹುತೇಕ ಶಿಫಾರಸುಗಳನ್ನು ಈಗಾಗಲೇ ಅನುಷ್ಠಾನಗೊಳಿಸಲಾಗಿದ್ದು, ಮುಂದಿನ ಪರೀಕ್ಷೆಯಲ್ಲಿ ಯಾವುದೇ ಲೋಪವಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಹೊಸ ಭದ್ರತಾ ಕ್ರಮಗಳ ಕುರಿತು ಅಫಿಡವಿಟ್ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದ ಸುಪ್ರೀಂಕೋರ್ಟ್, ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ ಎರಡನೇ ವಾರಕ್ಕೆ ಮುಂದೂಡಿತು. ಇದೇ ವೇಳೆ ಎನ್ಟಿಎಯನ್ನು ವಿಸರ್ಜಿಸಬೇಕು ಅಥವಾ ಪುನರ್ರಚಿಸಬೇಕು ಎಂದು ಕೋರಿ ಯುನೈಟೆಡ್ ಡಾಕ್ಟರ್ಸ್ ಫ್ರಂಟ್ ಹಾಗೂ ಅಖಿಲ ಭಾರತೀಯ ವೈದ್ಯಕೀಯ ಸಂಘಗಳ ಮಹಾ ಒಕ್ಕೂಟ ಅರ್ಜಿ ಸಲ್ಲಿಸಿದೆ.




























