
ಚಿತ್ರದುರ್ಗ(ಏ.24): ರಾಜ್ಯದ ಜನರು ಕಟ್ಟುವ ತೆರಿಗೆ ಹಣವನ್ನು ಮರಳಿ ನೀಡದೆ ರಾಜ್ಯಕ್ಕೆ ನಷ್ಟವನ್ನು ಮಾಡಿದ್ದಾರೆ.ದೇಶದ ಸಮಗ್ರ ಅಭಿವೃದ್ಧಿಗಾಗಿ ಹಗಲು, ರಾತ್ರಿ ದುಡಿಯುತ್ತೇನೆ ಎಂದು ಹೇಳಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಜನತೆಗೆ ಪದೇ ಪದೇ ಅನ್ಯಾಯವಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಟೀಕೆಯನ್ನು ಮಾಡಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ಚಿತ್ರದುರ್ಗದಲ್ಲಿ ಆಯೋಜಿಸಲಾದ ಪ್ರಚಾರ ಸಭೆಯಲ್ಲಿ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಪರ ಮತಯಾಚಿಸಿ ಸಭೆಯಲ್ಲಿ ಮಾತನಾಡಿದ ಅವರು ನಿಯತ್ತು ಹಾಗೂ ಶುದ್ಧ ಹೃದಯದಿಂದ ಮೋದಿ ಕಾರ್ಯ ನಿರ್ವಹಿಸುತ್ತಿಲ್ಲ. ಅವರಿಗೆ ಎಲ್ಲಿ ರಾಜಕೀಯವಾಗಿ ಲಾಭ ಆಗಿದೆಯೋ ಅಲ್ಲಿಗೆ ಅನುದಾನ ಕೊಡುತ್ತಾರೆ ಎಂದು ದೂರಿದರು.ಬರ ಹಿನ್ನೆಲೆಯಲ್ಲಿ ಅನುದಾನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನೇಕ ಬಾರಿ ಕೇಂದ್ರದ ಮುಂದೆ ಪ್ರಸ್ತಾವ ಸಲ್ಲಿಸಿ ಅನುದಾನ ಕೋರಿದರು. ಈವರೆಗೂ ಒಂದು ಪೈಸೆ ನೀಡಲಿಲ್ಲ. ಭದ್ರಾ ಮೇಲ್ದಂಡೆಗೆ ಬಜೆಟ್ ನಲ್ಲಿ ಹಣ ಕಾಯ್ದಿರಿಸಿದರೂ ಅನುದಾನ ಬಿಡುಗಡೆ ಮಾಡಲಿಲ್ಲ. ಮೋದಿ ದೇಶದ ಕೆಲ ಬಂಡವಾಳಶಾಹಿಗಳಿಗೆ ಅನುಕೂಲಕರ ವಾತಾವರಣ ಸೃಷ್ಟಿಸಿದ್ದಾರೆ.
ಬಂಡವಾಳಶಾಹಿಗಳ 16 ಲಕ್ಷ ಕೋಟಿ ರು. ಸಾಲ ಮನ್ನಾ ಮಾಡಿದ್ದಾರೆ. ದೇಶದ ಆಸ್ತಿಗಳನ್ನು ತಮ್ಮ ಸ್ನೇಹಿತರಿಗೆ ಮಾರಾಟ ಮಾಡುತ್ತಿದ್ದಾರೆ. ರೈತರು ಸಾಲದಲ್ಲಿ ಮುಳುಗಿದ್ದರೆ ಅವರತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ, ಆದರೆ, ಉದ್ಯೋಗಪತಿಗಳ ಸಾಲ ಮಾತ್ರ ಮನ್ನಾ ಆಗುತ್ತಿದೆ ಎಂದು ಪ್ರಿಯಾಂಕಾ ಗಾಂಧಿ ಆರೋಪ ಮಾಡಿದರು.