
ಬೆಂಗಳೂರು: ಆರೋಗ್ಯ ಇಲಾಖೆ ಅಧಿಕಾರಿಗಳು ರಾಜ್ಯದಲ್ಲಿ ಮೇ ತಿಂಗಳಲ್ಲಿ 33 ಕೊರೋನಾ ಸೋಂಕು ಪ್ರಕರಣ ದೃಢಪಟ್ಟಿದ್ದು, ಪ್ರಸ್ತುತ 16 ಸಕ್ರಿಯ ಕೊರೋನಾ ಸೋಂಕು ಪ್ರಕರಣ ವರದಿಯಾಗಿವೆ. ಯಾರೂ ಆಸ್ಪತ್ರೆಗೆ ದಾಖಲಾಗಿಲ್ಲ. ಜತೆಗೆ ತೀವ್ರ ಲಕ್ಷಣಗಳು ಪತ್ತೆಯಾಗಿಲ್ಲ. ಹೀಗಾಗಿ ರೂಪಾಂತರಿ ಆತಂಕ ಬೇಡ. ಆದರೆ ಮುನ್ನೆಚ್ಚರಿಕಾ ಕ್ರಮಗಳು ಕೈಗೊಳ್ಳುವುದು ಉತ್ತಮ ಎಂದು ಮಾಹಿತಿ ನೀಡಿದ್ದಾರೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯದಲ್ಲಿ 16 ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿದೆ. ಬೇರೆ ಬೇರೆ ದೇಶಗಳಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಆದರೆ ನಮ್ಮಲ್ಲಿ ಅಂತಹ ಯಾವುದೇ ಲಕ್ಷಣಗಳು ಪತ್ತೆಯಾಗಿಲ್ಲ. ಹೀಗಾಗಿ ಅನಗತ್ಯವಾಗಿ ಆತಂಕಪಡುವುದು ಬೇಡ. ಯಾವಾಗ ಪರೀಕ್ಷೆ ನಡೆಸಿದರೂ ಕೊರೋನಾ ಸೋಂಕು ಇದ್ದೇ ಇರುತ್ತದೆ. ಯಾವ ರೋಗ ಲಕ್ಷಣ ಇದ್ದು ಪರೀಕ್ಷೆ ನಡೆಸಿದರೂ ಸೋಂಕು ಪಾಸಿಟಿವ್ ಬರುತ್ತದೆ. ಇದನ್ನು ಸೋಂಕಿನ ತೀವ್ರತೆ ಎಂದು ಹೇಳಲಾಗುವುದಿಲ್ಲ. ನಾವು ಕೇಂದ್ರ ಸರ್ಕಾರದ ಜತೆ ಸತತ ಸಂಪರ್ಕದಲ್ಲಿದ್ದು, ಅನಗತ್ಯವಾದ ಭೀತಿ ಬೇಕಾಗಿಲ್ಲ ಎಂದು ತಿಳಿಸಿದರು.
ಮೇ ತಿಂಗಳಲ್ಲಿ 33 ಪ್ರಕರಣ ವರದಿಯಾಗಿದ್ದು, ಪ್ರಸ್ತುತ 16 ಪ್ರಕರಣ ಸಕ್ರಿಯವಾಗಿದೆ. ಈ ತಿಂಗಳಲ್ಲಿ ಹೆಚ್ಚು ಪ್ರಕರಣ ವರದಿಯಾಗಿದೆ ಎಂಬ ಕಾರಣಕ್ಕೆ ಎಚ್ಚರವಹಿಸಬೇಕು ಎಂದು ಆರೋಗ್ಯ ಇಲಾಖೆಯ ಸಾಂಕ್ರಾಮಿಕ ರೋಗಗಳ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.









