ಫೇಸ್‌ಬುಕ್, ವಾಟ್ಸಾಪ್‌ಗೆ ಹೊಸ ಪ್ರೀಮಿಯಂ ಫೀಚರ್‌ಗಳು

ಜಗತ್ತಿನ ಅತಿದೊಡ್ಡ ಸಾಮಾಜಿಕ ಜಾಲತಾಣ ಸಂಸ್ಥೆಯಾಗಿರುವ ಮೆಟಾ, ತನ್ನ ಬಳಕೆದಾರರಿಗಾಗಿ ‘ಮೆಟಾ ವನ್’ ಹೆಸರಿನ ಹೊಸ ಚಂದಾದಾರಿಕೆ ಸೇವೆಯನ್ನು ಪರಿಚಯಿಸಿದೆ. ಉಚಿತ ಸೇವೆಗಳು ಎಂದಿನಂತೆ ಮುಂದುವರಿಯಲಿದ್ದು, ಹೆಚ್ಚುವರಿ ವೈಶಿಷ್ಟ್ಯಗಳನ್ನು ಬಯಸುವವರು ಮಾತ್ರ ಹಣ ಪಾವತಿಸಿ ಈ ಪ್ರೀಮಿಯಂ ಯೋಜನೆಗಳನ್ನು ಬಳಸಬಹುದಾಗಿದೆ.
ಮೆಟಾ ವನ್ ಅಡಿಯಲ್ಲಿ ಫೇಸ್‌ಬುಕ್ ಪ್ಲಸ್, ಇನ್‌ಸ್ಟಾಗ್ರಾಮ್ ಪ್ಲಸ್, ವಾಟ್ಸಾಪ್ ಪ್ಲಸ್ ಸೇರಿದಂತೆ ವಿವಿಧ ಸೇವೆಗಳನ್ನು ಒಟ್ಟುಗೂಡಿಸಲು ಕಂಪನಿ ಮುಂದಾಗಿದೆ. ಜೊತೆಗೆ ಮೆಟಾ ಎಐ ಬಳಕೆದಾರರಿಗಾಗಿ ಮೆಟಾ ವನ್ ಪ್ಲಸ್ ಮತ್ತು ಮೆಟಾ ವನ್ ಪ್ರೀಮಿಯಂ ಎಂಬ ವಿಶೇಷ ಯೋಜನೆಗಳನ್ನೂ ಪರಿಚಯಿಸಲಾಗಿದ್ದು, ಸುಧಾರಿತ ಕೃತಕ ಬುದ್ಧಿಮತ್ತೆ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.
ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್ ಪ್ಲಸ್ ಚಂದಾದಾರಿಕೆಗೆ ತಿಂಗಳಿಗೆ 330 ರೂ. ನಿಗದಿಪಡಿಸಲಾಗಿದೆ. ಇದರಲ್ಲಿ ಸ್ಟೋರಿ ಅವಧಿ ವಿಸ್ತರಣೆ, ವಿಶೇಷ ಪ್ರೊಫೈಲ್ ವಿನ್ಯಾಸ, ಪ್ರೀಮಿಯಂ ರಿಯಾಕ್ಷನ್‌ಗಳು ಮತ್ತು ಪೋಸ್ಟ್‌ಗಳನ್ನು ಪಿನ್ ಮಾಡುವಂತಹ ಹೆಚ್ಚುವರಿ ಸೌಲಭ್ಯಗಳು ಲಭ್ಯವಾಗಲಿವೆ. ಈ ಯೋಜನೆ ಮುಖ್ಯವಾಗಿ ಕಂಟೆಂಟ್ ಕ್ರಿಯೇಟರ್‌ಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ.
ವಾಟ್ಸಾಪ್ ಪ್ಲಸ್ ಸೇವೆಗೆ ತಿಂಗಳಿಗೆ 250 ರೂ. ಶುಲ್ಕ ನಿಗದಿಯಾಗಿದ್ದು, ಹೊಸ ಥೀಮ್‌ಗಳು, ಕಸ್ಟಮ್ ಚಾಟ್ ಬ್ಯಾಕ್‌ಗ್ರೌಂಡ್‌ಗಳು, ಪ್ರತ್ಯೇಕ ರಿಂಗ್‌ಟೋನ್‌ಗಳು, ಪ್ರಮುಖ ಚಾಟ್‌ಗಳನ್ನು ಪಿನ್ ಮಾಡುವ ಆಯ್ಕೆ ಹಾಗೂ ಪ್ರೀಮಿಯಂ ಸ್ಟಿಕರ್‌ಗಳು ಸೇರಿದಂತೆ ಹಲವು ಹೆಚ್ಚುವರಿ ಫೀಚರ್‌ಗಳನ್ನು ಒಳಗೊಂಡಿದೆ. ಮೆಟಾ ವೇರಿಫೈಡ್ ಸೇವೆಯಂತಿಲ್ಲದ ಈ ಚಂದಾದಾರಿಕೆಯಲ್ಲಿ ಬ್ಲೂ ಟಿಕ್ ಸೌಲಭ್ಯ ಇರುವುದಿಲ್ಲ. ಮೇ 27ರಿಂದ ಜಾಗತಿಕವಾಗಿ ಈ ಸೇವೆ ಜಾರಿಗೆ ಬಂದಿದೆ.




























