
ಕರ್ನಾಟಕ ಸರ್ಕಾರವು ಮುಸ್ಲಿಂ ಮಹಿಳೆಯರ ಕುರಿತಾದ ಕಮಲ್ ಚಂದ್ರಾ ನಿರ್ದೇಶನ ಮಾಡಿ ಅನ್ನು ಕಪೂರ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಸಿನಿಮಾ ‘ಹಮಾರೆ ಬಾರಾ’ ಬಿಡುಗಡೆಗೆ ನಿಷೇಧ ಹೇರಿದೆ.
ಈ ಸಿನಿಮಾವು ಮುಸ್ಲಿಂ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯದ ಕತೆಯನ್ನು ಒಳಗೊಂಡಿದ್ದು ಸಿನಿಮಾದ ಬಿಡುಗಡೆಗೆ ಈಗಾಗಲೇ ಬಾಂಬೆ ಹೈಕೋರ್ಟ್ ತಡೆ ನೀಡಿದೆ. ಅಷ್ಟರಲ್ಲಾಗಲೆ ಕರ್ನಾಟಕ ಸರ್ಕಾರ ಸಿನಿಮಾದ ಬಿಡುಗಡೆ ಮತ್ತು ಸ್ಕ್ರೀಮ್ ಮೇಲೆ ನಿಷೇಧ ಹೇರಿದೆ.
ಕರ್ನಾಟಕ ಸಿನಿಮಾ ರೆಗುಲೇಶನ್ ಕಾಯ್ದೆ 1964 ಸೆಕ್ಷನ್ 15 (1) ಮತ್ತು 15 (5) ರ ಪ್ರಕಾರ ಈ ಸಿನಿಮಾದ ಪ್ರದರ್ಶನದಿಂದ ರಾಜ್ಯದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ಆಗುತ್ತದೆ ಎಂಬ ಕಾರಣ ನೀಡಿ ಸಿನಿಮಾದ ಪ್ರದರ್ಶನವನ್ನು ರಾಜ್ಯದಲ್ಲಿ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ಕೆಲ ವಾರಗಳ ಹಿಂದೆ ಈ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು ಇದರಿಂದ ಅಜರ್ ಎಂಬುವವರು ಈ ಸಿನಿಮಾದಲ್ಲಿ ಇಸ್ಲಾಂ ಧರ್ಮದ ಬಗ್ಗೆ ಋಣಾತ್ಮಕ ಸಂಭಾಷಣೆಗಳಿದ್ದು ಇಸ್ಲಾಂ ಧರ್ಮವನ್ನು ಕೆಟ್ಟ ರೀತಿಯಾಗಿ ಬಿಂಬಿಸಲಾಗಿದೆ ಎಂದು ಬಾಂಬೆ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಸಿನಿಮಾದ ಬಿಡುಗಡೆಗೆ ತಡೆ ನೀಡಿದ್ದು ವಿಚಾರಣೆಯನ್ನು ಜೂನ್ 10ಕ್ಕೆ ಮುಂದೂಡಿದೆ.
ಆದರೆ ಸಿನಿಮಾ ತಂಡವು “ತಮ್ಮ ಸಿನಿಮಾದಲ್ಲಿ ಯಾವುದೇ ಧರ್ಮವನ್ನು ಕೆಟ್ಟ ರೀತಿಯಲ್ಲಿ ಬಿಂಬಿಸಿಲ್ಲ. ದಯವಿಟ್ಟು ಸಿನಿಮಾವನ್ನು ಒಮ್ಮೆ ನೀಡಿ ನೋಡಿ, ನಂತರ ಅಭಿಪ್ರಾಯ ರೂಪಿಸಿಕೊಳ್ಳಿ. ಇದೆಲ್ಲರೂ ನೋಡಬೇಕಾದ ಸಿನಿಮಾ” ಎಂದು ಪ್ರತಿಪಾದಿಸಿದ್ದಾರೆ